ಮುಂಬೈ, ಎ.08 (DaijiworldNews/MB) : ಮಹಾರಾಷ್ಟ್ರದ ಇನ್ನೂ ಇಬ್ಬರು ಸಚಿವರು ಇನ್ನು 15 ದಿನದಲ್ಲಿ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಗುರುವಾರ ಹೇಳಿದ್ದಾರೆ.
ಗುರುವಾರ ಇಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಇನ್ನಿಬ್ಬರು ಸಚಿವರುಗಳು ರಾಜೀನಾಮೆ ನೀಡಬೇಕಾಗುತ್ತದೆ. ಕೆಲವರು ಈ ಸಚಿವರ ವಿರುದ್ದ ನ್ಯಾಯಾಲಯದ ಕದ ತಟ್ಟಲಿದ್ದಾರೆ. ಆಗ ಆ ಇಬ್ಬರು ಸಚಿವರು ಬೇರೆ ದಾರಿ ಇಲ್ಲದೆ ರಾಜೀನಾಮೆ ನೀಡಲೇ ಬೇಕಾಗುತ್ತದೆ'' ಎಂದು ಹೇಳಿದ್ದಾರೆ.
ಮುಂಬೈ ಪೊಲೀಸ್ ಇಲಾಖೆಯಲ್ಲೇ ನಾನು ಮುಂದುವರಿಯಲು ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ನನ್ನಲ್ಲಿ 2 ಕೋಟಿ ಕೇಳಿದ್ದರು. ಮತ್ತೋರ್ವ ಸಚಿವ ಅನಿಲ್ ಪರಬ್ ಅವರು ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಿ ತರಲು ಹೇಳಿದ್ದರು ಎಂದು ಸಚಿನ್ ವಾಜೆ ಬರೆದಿದ್ದಾರೆ ಎಂದು ಹೇಳಲಾದ ಪತ್ರ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಮುಖಂಡರು ಈ ಹೇಳಿಕೆ ನೀಡಿದ್ದಾರೆ.
''ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಮಾನ ನೋಡಿದಾಗ ಇಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದೇ ಉತ್ತಮವಾಗಿದೆ. ಆದರೆ ಇದು ನಮ್ಮ ಪಕ್ಷದ ಬೇಡಿಕೆ ಏನಲ್ಲ. ಎಲ್ಲಾ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುವುದಾದರೆ, ರಾಜ್ಯದ ಆಡಳಿತವನ್ನೇ ಕೇಂದ್ರಕ್ಕೆ ಯಾಕೆ ನೀಡಬಾರದು ಎಂದು ನಾವು ಕೇಳಬೇಕಾದ ಸ್ಥಿತಿ ಇದೆ'' ಎಂದು ಹೇಳಿದರು.
ಮಾಜಿ ಗೃಹಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಯುವಾಗಲೇ ಸಾರಿಗೆ ಸಚಿವ ಅನಿಲ್ ಪರಬ್ ವಿರುದ್ಧದ ಆರೋಪಗಳ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಿಸಿದರು.