ಬೆಂಗಳೂರು, ಎ.08 (DaijiworldNews/PY): "ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದ ನೀವು ನಿಜವಾದ ಅಸಮರ್ಥ ನಾಯಕ" ಎಂದು ಬಿಜೆಪಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ, ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿಬೇಕೇ? ಸರ್ಕಾರವೇ ಸರಿ ಇಲ್ಲ - ಕಾಗೋಡು, ಕಾಂಗ್ರೆಸ್ ಮುಗಿಸುತ್ತಿದ್ದೀರಿ - ಜನಾರ್ದನ ಪೂಜಾರಿ, ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್. ಈ ಧ್ವನಿಗಳು ನಿಮ್ಮಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ?" ಎಂದು ಪ್ರಶ್ನಿಸಿದೆ.
"ನೀವು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮ್ಮನ್ನು ಹೋದಲ್ಲಿ ಬಂದಲ್ಲಿ ಟೀಕೆ ಮಾಡುತ್ತಿದ್ದರು. ಅವರನ್ನು ನಿಯಂತ್ರಿಸಲಾಗದ ನೀವು ಈಗ ಬಿಜೆಪಿ ಪಕ್ಷದ ಬಗ್ಗೆ ಚಿಂತಿಸುವುದು ಹಾಸ್ಯದ ವಿಚಾರ. ಕಾಂಗ್ರೆಸ್ ಪಕ್ಷದಲ್ಲಿ ನೀವೊಬ್ಬ ವಲಸೆನಾಯಕ ಸಿದ್ದರಾಮಯ್ಯ ಅಷ್ಟೇ!" ಎಂದಿದೆ.
"ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದ ನೀವು ನಿಜವಾದ ಅಸಮರ್ಥ ನಾಯಕ. ನಿಮ್ಮ ಅಸಮರ್ಥತೆಯನ್ನು ಮುಚ್ಚಿಟ್ಟುಕೊಂಡು ಬೇರೆಯವರ ಸಮರ್ಥತೆಯ ಬಗ್ಗೆ ಪ್ರಶ್ನಿಸುವುದು ನಿಮಗೆ ಶೋಭೆ ತರುವುದಿಲ್ಲ" ಎಂದು ಹೇಳಿದೆ.
"ಸಿದ್ದರಾಮಯ್ಯಗೆ ಇಂತಹ ಆಲೋಚನೆ ಬರುವುದು ಸಹಜ, ಏಕೆಂದರೆ, ಪರಮೇಶ್ವರ್ ಗೆದ್ದರೆ ತಾನು ಸಿಎಂ ಆಗುವ ಕನಸಿಗೆ ಕುತ್ತು ಬರುತ್ತದೆ ಎಂದು ಬಲಪ್ರಯೋಗಿಸಿ ಪರಮೇಶ್ವರ್ ಅವರನ್ನು ಸೋಲಿಸಿದಿರಿ ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮೂಕ ಪ್ರೇಕ್ಷಕನನ್ನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು" ಎಂದಿದೆ.
"ವಿಧಾನಸೌಧ - ವಿಕಾಸ ಸೌಧದ ಮಧ್ಯೆ ಸಿದ್ದರಾಮಯ್ಯ ಸರ್ಕಾರ ನಿದ್ದೆ ಹೊಡೆಯುತ್ತಿದೆ ಎಂದು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತಿವಿದಿದ್ದರು. ಈ ಹೇಳಿಕೆಯನ್ನು ಸಿದ್ದರಾಮಯ್ಯ ಮರೆತಿರಬಹುದು, ಆದರೆ ರಾಜ್ಯದ ಜನತೆ ಮರೆತಿಲ್ಲ. ನಿಮ್ಮ ಅಸಮರ್ಥತೆಯನ್ನು ಸಾರ್ವಜನಿಕ ವೇದಿಕೆಯಲ್ಲೇ ಸ್ಪೀಕರ್ ತೆರೆದಿಟ್ಟಿದ್ದರು ಎಂದು ತಿಳಿಸಿದೆ.
"ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ನಿಮ್ಮ ಅಸಮರ್ಥತೆಯಿಂದಲ್ಲವೇ? ಬಾದಾಮಿಯಲ್ಲಿ ಮುಂದಿನ ಬಾರಿ ಸೋಲುವ ಭಯದಿಂದ ಮೂರನೇ ಕ್ಷೇತ್ರದ ಹುಡುಕಾಟದಲ್ಲಿರುವುದು ನಿಮ್ಮ ಅಸಮರ್ಥತೆಯಲ್ಲವೇ? ಸಮರ್ಥ & ಅಸಮರ್ಥ ಎನ್ನುವ ಹೋರಾಟ ಇರುವುದು ಡಿ.ಕೆ.ಶಿವಕುಮಾರ್ & ನಿಮ್ಮ ನಡುವೆಯೇ ಹೊರತು ಬಿಜೆಪಿಯಲ್ಲಲ್ಲ" ಎಂದು ಕಿಡಿಕಾರಿದೆ.