ನವದೆಹಲಿ, ಎ.08 (DaijiworldNews/MB) : ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ಇಂಧನ ಬೆಲೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದು, ''ವಾಹನಕ್ಕೆ ಇಂಧನ ತುಂಬಿಸುವುದು ಪರೀಕ್ಷೆಗಿಂತ ಕಡಿಮೆ ಏನಿಲ್ಲ'' ಎಂದು ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಅವರು, ''ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹದಿಂದಾಗಿ, ವಾಹನಕ್ಕೆ ಇಂಧನ ತುಂಬಿಸುವುದು ಪರೀಕ್ಷೆಗಿಂತ ಕಡಿಮೆ ಏನಿಲ್ಲ. ಹಾಗಿರುವಾಗ ಪ್ರಧಾನಿಯವರು ಈ ಬಗ್ಗೆ ಏಕೆ ಚರ್ಚಿಸುವುದಿಲ್ಲ'' ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ''ಖರ್ಚುಗಳ ಬಗ್ಗೆಯೂ ಚರ್ಚೆಯಾಗಬೇಕು'' ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ನಡೆಸಿದ ಒಂದು ದಿನದ ನಂತರ ಈ ವಿಚಾರದಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿ ಈ ಕೊರೊನಾ ಸಂಕಷ್ಟದ ಮಧ್ಯೆ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಕಳೆದ ಎಂಟು ದಿನಗಳಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆಯಾಗುತ್ತಿದ್ದರೂ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಬದಲಾಗದೆ ಉಳಿದಿದೆ.