ಬಳ್ಳಾರಿ, ಎ.08 (DaijiworldNews/PY): "ಸಾರಿಗೆ ನೌಕರರ ಸಮಸ್ಯೆಗಳನ್ನು ವೈರಿಗಳಂತೆ ನೋಡಬಾರದು ಬದಲಾಗಿ ತಾಯಿ ಹೃದಯದಂತೆ ನೋಡಬೇಕು" ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಾರಿಗೆ ನೌಕರರು ಮುಷ್ಕರ ಮಾಡಿರುವುದು ಬೇಸರದ ಸಂಗತಿ. ಸಾರಿಗೆ ನೌಕರರ ಸಮಸ್ಯೆಯನ್ನು ವೈರಿಗಳ ರೀತಿ ನೋಡಬಾರದು. ಬದಲಾಗಿ ತಾಯಿಯ ಹೃದಯದಂತೆ ಕಾಣಬೇಕು. ನೀವು ಬಡವರ ಪರ ಎಂದು ಹೇಳುತ್ತೀರಿ. ಸಾರಿಗೆ ನೌಕರರು 12 ಸಾವಿರದಲ್ಲಿ ಹೇಗೆ ಜೀವನ ನಿರ್ವಹಣೆ ಮಾಡಬೇಕು?. ಆರನೇ ವೇತನ ಆಯೋಗ ಮಾಡುವದಕ್ಕೇ ಏನು ಕಷ್ಟ ಇದೆ?. ಬಡನೌಕರರ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಪ್ರಸ್ತುತ ಹೃದಯವಿಲ್ಲದ, ಮಾನವೀಯತೆ ಇಲ್ಲದ ಸರ್ಕಾರ ಆಡಳಿತದಲ್ಲಿದೆ. ಈ ಸರ್ಕಾರಕ್ಕೆ ಮತ್ತೆ ಜನತೆ ಪಾಲಿಕೆ ಚುನಾವಣೆ ಅವಕಾಶ ಕಲ್ಪಿಸಬಾರದು" ಎಂದಿದ್ದಾರೆ.
"ಕಾಂಗ್ರೆಸ್ ಪಕ್ಷವು ಪಾಲಿಕೆ ಚುನಾವಣೆಗೆ ತಯಾರಾಗಿ ನಿಂತಿದ್ದು, ವಿವಿಧ ತಂಡಗಳನ್ನು ಮಾಡಿ ಜವಾಬ್ದಾರಿಯನ್ನು ನಾಯಕರಿಗೆ ವಹಿಸಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದ ಸಂದರ್ಭ ಬಜೆಟ್ನಲ್ಲಿ ಪಾಲಿಕೆಗಳಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದೆವು. ಜನರ ಹಿತಾಸಕ್ತಿಯನ್ನು ಬಯಸದ ಬಿಜೆಪಿಗೆ ಅಧಿಕಾರ ನೀಡಬಾರದು" ಎಂದು ಹೇಳಿದ್ದಾರೆ.