ಖಮ್ಮಮ್, ಏ. 08 (DaijiworldNews/HR): ಭದ್ರಾದ್ರಿ ಕೊಟ್ಟಗುಡೆಮ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಸ್ವಂತ ಅಣ್ಣನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ದೂರು ದಾಖಲಾದ ಬೆನ್ನಲ್ಲೇ ಆರೋಪಿ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಯುವತಿಯ ಸಹೋದರ ವಿಜಯ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದು, ದೂರು ದಾಖಲಿಸಿದ್ದ ಸಹೋದರಿ, ಸ್ವಂತ ಅಣ್ಣನೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹೇಳಿದ್ದಳು.
ಸಂತ್ರಸ್ತೆಯು ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದು, ತನ್ನ ಅಣ್ಣನ ಕ್ರೌರ್ಯದ ಬಗ್ಗೆ ತಾಯಿ ಮತ್ತು ಅಜ್ಜಿಗೆ ಹೇಳಿಕೊಂಡರು ಸಹ ಅವರು ತಲೆಕೆಡಿಸಿಕೊಳ್ಳಲಿಲ್ಲವಂತೆ. ಪಾಲಕರು ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯ್ ಕೆಲವು ತಿಂಗಳಿಂದ ಸಹೋದರಿಗೆ ಕಿರುಕುಳ ನೀಡಿತ್ತಿದ್ದು ಈ ಬಗ್ಗೆ ತಾಯಿಯ ಬಳಿ ಹೇಳಿಕೊಂಡರು ಯಾವುದೇ ಸಹಾಯ ಮಾಡಲಿಲ್ಲ. ಬಳಿಕ ನೋವನ್ನು ಹೇಳಿಕೊಳ್ಳಲು ಅಜ್ಜಿ ಮತ್ತು ತಾತನ ಮನೆಗೆ ಹೋದರೆ ಅಲ್ಲಿಯೂ ಸಹ ಬೆಂಬಲ ಸಿಗಲಿಲ್ಲ. ಬದಲಾಗಿ ಅಜ್ಜಿ-ತಾತನ ಮಗನು ಸಹ ಅತ್ಯಾಚಾರ ಎಸಗಿದ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ, ಈ ಬಗ್ಗೆ ಯಾರಿಗೂ ಹೇಳಿದಂತೆ ಬೆದರಿಕೆಯನ್ನು ಹಾಕಿದ್ದರಂತೆ.
ಬಳಿಕ ಆಕೆ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.