ಬೆಂಗಳೂರು, ಎ.08 (DaijiworldNews/PY): "ಕೊರೊನಾ ಮಾರ್ಗಸೂಚಿಯಲ್ಲಿ ರಂಜಾನ್ ಆಗಲಿ, ಯುಗಾದಿ ಹಬ್ಬವಾಗಲಿ ಯಾವುದಕ್ಕೂ ಬದಲಾವಣೆ ಹಾಗೂ ವಿನಾಯಿತಿ ಇಲ್ಲ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಒಟ್ಟು ಏಳು ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ಆಯುಕ್ತರು ಸೇರಿದಮತೆ ನಗರಾಡಳಿತ ತಜ್ಞರೊಂದಿಗೆ ಸಭೆ ನಡೆಸುತ್ತೇನೆ. ಕೊರೊನಾ ನಿಯಂತ್ರಣಕ್ಕೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇನೆ" ಎಂದಿದ್ದಾರೆ.
"ಯುಗಾದಿ ಹಬ್ಬ ಬರುತ್ತಿದೆ ಎಂದು ಕೊರೊನಾ ಸುಮ್ಮನಾಗಲ್ಲ. ಬೆಂಗಳೂರಿನಿಂದ ಗ್ರಾಮೀಣ ಭಾಗಕ್ಕೆ ತೆರಳುವವರು ಎಚ್ಚರಿಕೆ ವಹಿಸುವುದು ಅಗತ್ಯ. ಹಳ್ಳಿಗಳಲ್ಲಿ ಕೂಡಾ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು" ಎಂದು ತಿಳಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು, ಎಲ್ಲಾ ರಾಜ್ಯಗಳ ಪರಿಸ್ಥಿತಿಗಳ ಬಗ್ಗೆ ಮಾಡಹಿತಿ ಪಡೆದುಕೊಳ್ಳಲಿದ್ದಾರೆ. ಎಪ್ರಿಲ್ 7ರ ಬುಧವಾರದಂದು ಸುಮಾರು 50 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಈ ಜಿಲ್ಲೆಗಳಿಗೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
"ರಾಜ್ಯದಲ್ಲಿ ಬುಧವಾರದಂದು ಒಂದೇ ದಿನ ಸುಮಾರು ಏಳು ಸಾವಿರ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಐದು ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತದೆ" ಎಂದಿದ್ದಾರೆ.