ನವದೆಹಲಿ, ಏ. 08 (DaijiworldNews/HR): "ಚೀನಾ ದೇಶದ ಸೈಬರ್ ದಾಳಿಯು ಭಾರತಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ" ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭಾರತವು ಸೈಬರ್ ರಕ್ಷಣೆಯ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದ್ದು, ಅಂತಹ ಬೆದರಿಕೆಗಳನ್ನು ಎದುರಿಸಲು ಆಕ್ರಮಣಕಾರಿ ಸೈಬರ್ ಸಾಮರ್ಥ್ಯಗಳನ್ನು ರೂಪಿಸುವತ್ತ ಕೆಲಸ ಮಾಡುತ್ತಿದೆ" ಎಂದರು.
"ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಲು ಚೀನಾ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು, ಇಷ್ಟು ಅನುದಾನ ಪೂರೈಸಲು ಅದಕ್ಕೆ ಸಾಮರ್ಥ್ಯವಿದೆ. ಹೀಗಾಗಿ ಅವರು ಈ ವಿಚಾರದಲ್ಲಿ ಖಂಡಿತವಾಗಿಯೂ ನಮಗಿಂತ ಮುಂದಿದ್ದು, ನಾವು ಕೂಡ ಅವರೊಂದಿಗೆ ಸರಿಸಮನಾಗಿ ನಿಲ್ಲಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ' ಎಂದಿದ್ದಾರೆ.
ಇನ್ನು "ಸೈಬರ್ ರಕ್ಷಣೆಗಾಗಿ ವ್ಯವಸ್ಥೆಯೊಂದನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದು, ನಮಗೆ ಅದು ಸಾಧ್ಯವಾಗಿದ್ದು, ಸೇನಾ ಪಡೆಗಳ ಒಳಗೆ ನಮ್ಮದೇ ಆದ ಸೈಬರ್ ಸಂಸ್ಥೆಯೊಂದನ್ನು ಸ್ಥಾಪಿಸಬೇಕಿದೆ" ಎಂದು ಹೇಳಿದ್ದಾರೆ.