ಮೈಸೂರು, ಎ.08 (DaijiworldNews/MB) : ''ರೈತರನ್ನೇ ದಾರಿ ತಪ್ಪಿಸಿದವರು, ಕೆಎಸ್ಆರ್ಟಿಸಿ ನೌಕರರನ್ನು ಬಿಡುತ್ತಾರಾ'' ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಈ ಹಿನ್ನೆಲೆ ಸಂಸದ ಪ್ರಯಾಪ್ಸಿಂಹ ಅವರು ಮೈಸೂರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರ್ಯಾಯ ಬಸ್ ಸೇವೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರೈತರನ್ನೇ ದಾರಿ ತಪ್ಪಿಸಿದವರನ್ನು ನಮ್ಮ ನಾಯಕ ಎಂದು ಹೇಳಿದರೆ, ಕೆಎಸ್ಆರ್ಟಿಸಿ ನೌಕರರು ದಾರಿ ತಪ್ಪದೇ ಇರುತ್ತಾರಾ? ಕೆಎಸ್ಆರ್ಟಿಸಿ ನೌಕರರು ಆತನನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿರುವುದೇ ತಪ್ಪು'' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ವಾಗ್ದಾಳಿ ನಡೆಸಿದರು.
''ಪ್ರೊ| ನಂಜುಂಡಸ್ವಾಮಿ, ಕೆ. ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು ಹಾಗೂ ಅವರ ಹೋರಾಟದ ಬಗ್ಗೆ ನನಗೆ ಗೌರವವಿತ್ತು. ಆದರೆ ಅವರಿಬ್ಬರು ನಿಧನ ಹೊಂದಿದ್ದ ಬಳಿಕ ಈಗ ಅವರಂತವರು ಯಾರೂ ರೈತ ಮುಖಂಡರು ಇಲ್ಲ. ಈಗ ಇರುವವರು ಬರೀ ಹೋರಾಟಗಾರರು'' ಎಂದು ಹೇಳಿದರು.
''ಕೆಎಸ್ಆರ್ಟಿಸಿ ನೌಕರರು ಹೀಗೆ ಸಂಕಷ್ಟದ ಸಂದರ್ಭದಲ್ಲಿ ಹೋರಾಟ ನಡೆಸುವಾಗ ನಾವು ಈ ವಿಭಾಗವನ್ನೂ ಕೂಡಾ ಖಾಸಗೀಕರಣ ಮಾಡುವ ಚಿಂತನೆ ನಡೆಸಬೇಕಾಗುತ್ತದೆ. ಈಗಾಗಲೇ ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ'' ಎಂದು ಕೂಡಾ ಅವರು ತಿಳಿಸಿದರು.
''ನಿಮ್ಮ ಮೇಲೆ ಇಟ್ಟಿರುವ ಪ್ರೀತಿ ಮುಷ್ಕರ ಮಾಡುವ ಮೂಲಕ ಕಳೆದುಕೊಳ್ಳಬೇಡಿ. ಜನರೇ ಎಲ್ಲಾ ವಿಭಾಗ ಖಾಸಗೀಕರಣ ಮಾಡಬೇಕು ಎಂದು ಒತ್ತಾಯಿಸುವಂತೆ ಮಾಡಬೇಡಿ. ಸರ್ಕಾರ ಎಸ್ಮಾ ಜಾರಿ ಮಾಡಬೇಕಾದ ಸ್ಥಿತಿಯನ್ನು ಕೂಡಾ ತಂದೊಡ್ಡಬೇಡಿ'' ಎಂದು ಮನವಿ ಮಾಡಿದರು.
ಇನ್ನು ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ದ ಕಿಡಿಕಾರಿದ ಪ್ರತಾಪ್ ಸಿಂಹ, ''ಸಿದ್ದರಾಮಯ್ಯ ನೌಕರರ ಬೇಡಿಕೆ ಈಡೇರಿಸಲು ಹೇಳುತ್ತಾರೆ. ಆದರೆ ಅವರು ಸಿಎಂ ಆಗಿದ್ದಾಗಲೇ ಆ ಕೆಲಸವನ್ನು ಅವರೇ ಮಾಡಬಹುದಿತ್ತಲ್ವಾ'' ಎಂದು ಪ್ರಶ್ನಿಸಿದರು.