ಬೆಂಗಳೂರು, ಎ.08 (DaijiworldNews/PY): "ಪ್ರಯಾಣಿಕರಿಗೆ ತೊಂದರೆ ಆಗದ ರೀತಿಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಬೇಕು. ಅನಿರ್ಧಿಷ್ಟಾವಧಿಯ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಅಗತ್ಯಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ" ಎಂದು ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಹೇಳಿದ್ದಾರೆ.
ಆರನೇ ವೇತನ ಆಯೋಗದ ಶಿಫಾರಸು ಅನ್ವಯಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರ ಮುಷ್ಕರ ಗುರುವಾರವೂ ಮುಂದುವರೆದಿದೆ. ಇಂದು 11 ಗಂಟೆಯವರೆಗೆ ಕೆಎಸ್ಆರ್ಟಿಸಿಯ 77, ಬಿಎಂಟಿಸಿಯ 42, ಎನ್ಇ-ಕೆಎಸ್ಆರ್ಟಿಸಿಯ 76 ಹಾಗೂ ಎನ್ಡಬ್ಲ್ಯೂ-ಕೆಎಸ್ಆರ್ಟಿಸಿಯ 15 ಬಸ್ಗಳು ಸಂಚರಿಸಿವೆ. ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗಳಿಗೆ ರಕ್ಷಣೆ ನೀಡುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ಹೀಗಿದ್ದರೂ ಕೂಡಾ ಸಾರಿಗೆ ನೌಕರರು ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಅವರು, "ಈ ಹಿಂದೆ ಈ ರೀತಿಯ ಪ್ರತಿಭಟನೆ ನಡೆಸಿಲ್ಲ. ಒಂದು ವೇಳೆ ಅಗತ್ಯಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ. ಈ ಮುಖೇನ ಸಾರಿಗೆ ಸಂಚಾರದಲ್ಲಿ ಯಾವುದೇ ರೀತಿಯಾದ ವ್ಯತ್ಯಾಸ ಆಗದಂತೆ ಕ್ರಮ ತೆಗೆದುಕೊಳ್ಳುವ ಯೋಚನೆ ಮಾಡಲಾಗುತ್ತಿದೆ" ಎಂದಿದ್ದಾರೆ.
"ಮುಷ್ಕರದ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗದಂತೆ ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಅದಕ್ಕಾಗಿ ಎರಡು ವರ್ಷಗಳ ಹಿಂದೆ ಸಾರಿಗೆ ಇಲಾಖೆಯಿಂದ ನಿವೃತ್ತರಾಗಿರುವ ನೌಕರರ ಪಟ್ಟಿಯನ್ನು ಮಾಡಲಾಗುತ್ತಿದ್ದು, ಆ ನೌಕರರನ್ನು ಪುನಃ ಕರೆಸಿ, ಸಾರಿಗೆ ಬಸ್ ಸಂಚಾರವನ್ನು ಯಥಾಸ್ಥಿಗೆ ಬರುವಂತ ಯತ್ನಕ್ಕೂ ಚಿಂತನೆ ಮಾಡಿದೆ" ಎಂದು ತಿಳಿಸಿದ್ದಾರೆ.
"ಏಕೆ ಈ ರೀತಿಯಾಗಿ ಮುಷ್ಕರ ನಡೆಸುತ್ತಿದ್ದಾರೆ ತಿಳಿದಿಲ್ಲ. ಈ ಹಿಂದೆ 2-3 ದಿನಗಳಲ್ಲಿ ಮಾತುಕತೆ ಮೂಲಕ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡ ನಿದರ್ಶನಗಳಿವೆ" ಎಂದಿದ್ದಾರೆ.