ಬೀದರ್, ಏ. 08 (DaijiworldNews/HR): "ರಾಜ್ಯದ ಮುಖ್ಯಮಂತ್ರಿ ವಿರುದ್ದವೇ ಹೇಳಿಕೆ ಕೊಡುತ್ತಿರುವ ಸ್ವಪಕ್ಷೀಯರ ವಿರುದ್ಧ ಕ್ರಮ ಕೈಗೊಳ್ಳಲಾಗದೆ ಕೈಕಟ್ಟಿ ಕುಳಿತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ ಕಟೀಲ್ ಅಸಮರ್ಥ ಅಧ್ಯಕ್ಷ" ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಚಿವ ಈಶ್ವರಪ್ಪ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿಯೇ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಅಧ್ಯಕ್ಷ ಕಟೀಲ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಮೇ ನಲ್ಲಿ ಮುಖ್ಯಮಂತ್ರಿ ಮನೆಗೆ ಹೋಗ್ತಾರೆ ಅಂತ ಯತ್ನಾಳ ಬರಂಗವಾಗಿಯೇ ಹೇಳುತ್ತಿದ್ದಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಕೈಕಟ್ಟಿಕುಳಿತಿರುವ ಕಟೀಲ್ ಅಸಮರ್ಥ ಅಧ್ಯಕ್ಷ" ಎಂದರು.
ಇನ್ನು "ನಾನು ಮತ್ತು ಡಿ.ಕೆ ಶಿವಕುಮಾರ ಇಬ್ಬರೂ ಕೂಡಿಕೊಂಡೇ ಉಪ ಚುನಾವಣೆ ಪ್ರಚಾರ ನಡೆಸುತ್ತಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಯಾವತ್ತೂ ಅಹಿಂದ ಪರವಾಗಿಯೇ ಇದ್ದೇವೆ. ಅಹಿಂದ ಪರವಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.