ಬೆಂಗಳೂರು, ಎ.08 (DaijiworldNews/MB) : ತನಗೆ ಹಾಗೂ ಗಂಡನ ನಡುವೆ ಜಗಳವಾಗುತ್ತಿದ್ದ ವೇಳೆ ಸಾದಾ ತನ್ನ ಅಪ್ಪನ ಪರವಾಗಿಯೇ ನಿಲ್ಲುತ್ತಿದ್ದ ಹಾಗೂ ತಾನು ಯಾರೊಂದಿಗೆ ಮಾತನಾಡಿದರೂ ಅದನ್ನು ತನ್ನ ತಂದೆಗೆ ಹೇಳುತ್ತಿದ್ದ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ದಾರುಣ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ 3 ವರ್ಷದ ಪುತ್ರಿ ವಿನುತಾ ಹತ್ಯೆಯಾದ ಮಗು. ತಾಯಿ ಸುಧಾ (28) ಈ ಕೃತ್ಯ ಎಸಗಿದ್ದು ಆಕೆಯನ್ನು ಬಂಧನ ಮಾಡಲಾಗಿದೆ.
ಕೌಟುಂಬಿಕ ಕಾರಣದಿಂದಾಗಿ ತನ್ನ ಮೊದಲ ಪತ್ನಿಯಿಂದ ದೂರವಿದ್ದ ಚಿತ್ರದುರ್ಗ ಮೂಲದ ವೀರಣ್ಣ ಟೋಲ್ಗೇಟ್ನಲ್ಲಿ ಕೆಲಸ ಮಾಡುತ್ತಿದ್ದ ಸುಧಾಳನ್ನು ನಾಲ್ಕು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮೂರೂವರೆ ವರ್ಷದ ಹೆಣ್ಣು ಮಗು ಇದ್ದು ತಾನು ಕೆಲಸಕ್ಕೆ ಹೋಗುವ ಸಂದರ್ಭ ತಾಯಿ ಸುಧಾ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು.
ಏತನ್ಮಧ್ಯೆ ಮಗು ವಿನುತಾ, ತಾಯಿ ಸುಧಾ ಯಾರೊಂದಿಗೆ ಮಾತನಾಡಿದರೂ ತಂದೆಗೆ ಹೇಳಲು ಆರಂಭಿಸಿದ್ದಳು. ಇದರಿಂದ ಮಗಳ ಮೇಲೆ ಕೋಪಗೊಂಡ ತಾಯಿ ನೀನು ತಂದೆಯ ಪರವಾಗಿ ಮಾತನಾಡುತ್ತೀಯ ಎಂದು ಹೊಡೆಯುತ್ತಿದ್ದಳು. ಈ ವಿಚಾರದಲ್ಲೇ ದಂಪತಿಯ ನಡುವೆ ಜಗಳವಾಗುತ್ತಿತ್ತು.
ಮಂಗಳವಾರ ಮಧ್ಯಾಹ್ನ ದಂಪತಿಗಳ ನಡುವೆ ಟಿವಿ ವಿಷಯದಲ್ಲಿ ಜಗಳವಾಗಿದ್ದು ಈ ಸಂದರ್ಭ ಮಗಳು ತಂದೆಯ ಪರವಾಗಿ ಮಾತನಾಡಿದ್ದಾಳೆ. ಇದರಿಂದಾಗಿ ಕೋಪಗೊಂಡ ತಾಯಿ ಸುಧಾ ಸಂಜೆ ಪುತ್ರಿಯನ್ನು ಗೋಬಿ ಮಂಚೂರಿ ತಿನ್ನಿಸುತ್ತೇನೆ ಎಂದು ಹೇಳಿ ಹೊರಗಡೆ ಕರೆದೊಯ್ದು ಹತ್ಯೆಗೈದಿದ್ದಾಳೆ.
ಈ ಸಂದರ್ಭದಲ್ಲಿ ಮನೆಗೆ ಬಂದ ವೀರಣ್ಣ ಮನೆಯಲ್ಲಿ ಪತ್ನಿ ಮಗು ಇಲ್ಲದ್ದನ್ನು ಕಂಡು, ಪತ್ನಿಗೆ ಕರೆ ಮಾಡಿದ್ದು, ತಾನು ಗೋಬಿ ಮಂಚೂರಿ ಕೊಡಿಸಲೆಂದು ಮಗಳನ್ನು ಕರೆದುಕೊಂಡು ಬಂದೆ, ಆದರೆ ಆಕೆ ಈಗ ಕಾಣಿಯಾಗಿದ್ದಾಳೆ ಎಂದು ಹೇಳಿದ್ದಾಳೆ. ಬಳಿಕ ಪೊಲೀಸ್ ಠಾಣೆಗ ಹೋಗಿ ಇವರಿಬ್ಬರು ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಮಗುವಿನ ಮೃತದೇಹ ಪತ್ತೆಯಾಗಿದ್ದು ದಂಪತಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಸುಧಾ ಅನುಮಾನಾಸ್ಪದವಾಗಿ ವರ್ತಿಸಿದ್ದಾಳೆ. ಇನ್ನು ಅಲ್ಲಿನ ಸ್ಥಳೀಯರು ಹಾಗೂ ಗೋಬಿ ಮಂಚೂರಿ ಅಂಗಡಿಗೆ ಮಾಲೀಕನ ಬಳಿ ಕೇಳಿದಾಗ ಸುಧಾ ಮಗುವನ್ನು ಗೋಬಿ ಅಂಗಡಿಗೆ ಕರೆದುಕೊಂಡು ಬಂದಿಲ್ಲ ಎಂದು ತಿಳಿದು ಬಂದಿದೆ. ಮನೆಯಲ್ಲಿ ತಪಾಸಣೆ ನಡೆಸಿದ ವೇಳೆ ಕೃತ್ಯಕ್ಕೆ ಬಳಸಿದ್ದ ವೇಲ್ನಲ್ಲಿ ರಕ್ತ ಅಂಟಿಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ತಾಯಿ ಸುಧಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿರುವ ಸುಧಾ, ಮಗಳು ವಿನುತಾ ಯಾವಗಲೂ ತಂದೆಯ ಪರವಾಗಿಯೇ ಮಾತನಾಡುತ್ತಿದ್ದಳು. ತಂದೆ ಇಲ್ಲದ ಸಂದರ್ಭ ನಾನು ಏನು ಮಾಡಿದರೂ ಅದನ್ನು ತಂದೆಯ ಬಂದಾಗ ಹೇಳುತ್ತಿದ್ದಳು. ಬೇರೆಯವರ ಮುಂದೆ ನನ್ನನ್ನು ನಿಂದಿಸುತ್ತಿದ್ದಳು. ನನಗೆ ಕೋಪ ಬಂದು ನಾನು ಕೊಲೆ ಮಾಡಿದೆ ಎಂದು ಹೇಳಿದ್ದಾಳೆ.