ಗುವಾಹಟಿ, ಏ. 08 (DaijiworldNews/HR): ಛತ್ತಿಸ್ಘಡದಲ್ಲಿ ಮಾವೋವಾದಿಗಳು ಭದ್ರತಾ ಸಿಬ್ಬಂದಿಗಳನ್ನು ಹತ್ಯೆಗೈದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಕ್ಕಾಗಿ ದೇಶದ್ರೋಹ ಆರೋಪದ ಮೇಲೆ ಅಸ್ಸಾಂ ಲೇಖಕಿ ಶಿಖಾ ಶರ್ಮಾ ಅವರನ್ನು ಬುಧವಾರ ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ಕ್ರೂರವಾಗಿ ಹತ್ಯೆಗೈದ ಎರಡು ದಿನಗಳ ನಂತರ ಏಪ್ರಿಲ್ 5 ರಂದು ಶಿಖಾ ಶರ್ಮಾ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, "ಸಂಬಳಕ್ಕಾಗಿ ದುಡಿಯುವ ಜನರು ಕರ್ತವ್ಯದ ಸಮಯದಲ್ಲಿ ಸತ್ತರೆ ಅವರನ್ನು ಹುತಾತ್ಮರೆಂದು ಕರೆಯಲಾಗುವುದಿಲ್ಲ. ಹಾಗಾದರೆ ವಿದ್ಯುತ್ ಇಲಾಖೆಯ ಉದ್ಯೋಗಿಯೂ ವಿದ್ಯುದಾಘಾತದಿಂದ ಸಾವನ್ನಪ್ಪಿದರೆ ಆತ ಕೂಡ ಹುತಾತ್ಮರಾಗುತ್ತಾನೆ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ 11,000 ಕ್ಕೂ ಹೆಚ್ಚು ಕಾಮೆಂಟ್ಗಳೊಂದಿಗೆ ಮತ್ತು ಫೇಸ್ಬುಕ್ನಲ್ಲಿ ಕನಿಷ್ಠ 1,600 ಷೇರುಗಳೊಂದಿಗೆ ವಿವಾದವನ್ನು ಹುಟ್ಟುಹಾಕಿದೆ.
ಇಬ್ಬರು ಬಿಜೆಪಿ ಕಾರ್ಯಕರ್ತರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಐಟಿ ಕಾಯ್ದೆಯ ಸೆಕ್ಷನ್ 45, ಜೊತೆಗೆ ಪೊಲೀಸರು 124 ಎ (ದೇಶದ್ರೋಹ), 294 ಎ, 500 (ಮಾನಹಾನಿ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
"ಬುಧವಾರ ರಾತ್ರಿ ಆಕೆಯನ್ನು ಬಂಧಿಸಲಾಗಿದ್ದು, ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ನಾವು ಪೊಲೀಸ್ ಕಸ್ಟಡಿ ಕೋರಿಲ್ಲ. ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ" ಎಂದು ಗುವಾಹಟಿ ಪೊಲೀಸ್ ಆಯುಕ್ತ ಮುನ್ನಾ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.
ಏಪ್ರಿಲ್ 3 ರಂದು ಶಂಕಿತ ಮಾವೋವಾದಿಗಳು ವಿವಿಧ ಪಡೆಗಳ 22 ಭದ್ರತಾ ಸಿಬ್ಬಂದಿಯನ್ನು ಕೊಂದು 31 ಜನರನ್ನು ಗಾಯಗೊಳಿಸಿದ್ದರು.
ಇನ್ನು ಈ ಹಿಂದೆ ಶಿಖಾ ಶರ್ಮಾ ಅವರು ರಾಜ್ಯದಲ್ಲಿರುವ ಆಡಳಿತಾರೂಡ ಬಿಜೆಪಿ ವಿರುದ್ಧ ಪೋಸ್ಟ್ ಮಾಡಿ, ಬಳಿಕ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಬೆದರಿಕೆಗಳನ್ನು ಕೂಡ ಎದುರಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು, ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.