ಬಸವಕಲ್ಯಾಣ, ಎ.08 (DaijiworldNews/MB) : ''ಅಲ್ಲಾಹನ ಮೇಲೆ ನಂಬಿಕೆ ಇದ್ದರೆ ಬಸವಕಲ್ಯಾಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಯಿಂದ 10 ಕೋಟಿ ಪಡೆದಿರುವುದನ್ನು ಶಾಸಕ ಜಮೀರ್ ಅಹ್ಮದ್ ಸಾಬೀತುಪಡಿಸಲಿ'' ಎಂದು ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
''ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲಾಗಿದೆ ಎಂದು ಸ್ಪಷ್ಟಪಡಿಸಿ, ನನ್ನ ಮೇಲೆ ಆರೋಪ ಮಾಡಿರುವ ಜಮೀರ್ ಸಾಧ್ಯವಾದರೆ ಸಾಬೀತುಪಡಿಸಲಿ'' ಎಂದು ಹೇಳಿದ್ದಾರೆ.
''ಈ ಕ್ಷೇತ್ರವನ್ನು ದತ್ತು ಪಡೆದು ಉದ್ಧಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳ್ಳು ಭರವಸೆ ನೀಡಿದ್ದಾರೆ. ಈಗ ಅವರ ಭರವಸೆ ಬರೀ ಮಾತಿಗೆ, ಚುನಾವಣೆ ಬಂದಾಗ ನಾವು ಸ್ವರ್ಗವನ್ನೇ ಧರೆಗೆ ಇಳಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಮತ್ತೆ ಯಾವುದೇ ಕೆಲಸ ಅವರು ಮಾಡಿಲ್ಲ'' ಎಂದು ಆರೋಪಿಸಿದರು.
''ಈ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿ 7 ಬಾರಿ ಗೆಲುವು ಸಾಧಿಸಿದ್ದಾರೆ. ಇದು ಜೆಡಿಎಸ್ ಭದ್ರಕೋಟೆ, ಆದ್ದರಿಂದ ಈ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕು. ಇದಕ್ಕಾಗಿ ನಾನು ಒಂದು ವಾರ ಇಲ್ಲಿಯೇ ಇರಲಿದ್ದೇನೆ'' ಎಂದು ಕೂಡಾ ಅವರು ಹೇಳಿದ್ದಾರೆ.
ಇನ್ನು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ''ಸಾರಿಗೆ ನೌಕರರ ವೇತನ ಹೆಚ್ಚಳವಾಗಬೇಕು ಎಂದು ನಾನೂ ಆಗ್ರಹಿಸುತ್ತೇನೆ. ವೇತನ ಹೆಚ್ಚಳ ಮಾಡಲು 700 ಕೋಟಿ ಬೇಕಾದೀತು'' ಎಂದು ಹೇಳಿದರು.