ಬೆಂಗಳೂರು, ಎ.08 (DaijiworldNews/MB) : ನಮ್ಮ ಪಕ್ಷದ ಡಿಎನ್ಎನಲ್ಲಿಯೂ ವಂಶಪಾರಂಪರ್ಯದ ಆಡಳಿತವಿಲ್ಲ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿಯ ರಾಜಕಾರಣಿಗಳ ಲೀಸ್ಟ್ ಮಾಡಿ, ''ಸಿ.ಟಿ. ರವಿ ಅವರೇ, ನಿಮ್ಮ ಪಕ್ಷದ ವಂಶವೃಕ್ಷ ಸ್ವಲ್ಪ ನೋಡಿಕೊಳ್ಳಿ'' ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿ.ಟಿ. ರವಿ ಅವರು, ''ರಾಜ್ಯದಲ್ಲಿ ವಂಶಪಾರಂಪರ್ಯದ ಆಡಳಿತ ಇಲ್ಲ. ನಮ್ಮ ಪಕ್ಷದ ಡಿಎನ್ಎನಲ್ಲಿಯೂ ಅದು ಇಲ್ಲ. ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ. ಯಡಿಯೂರಪ್ಪ ನಮ್ಮಸರ್ವೋಚ್ಚ ನಾಯಕರೇ ಹೊರತು ಮಾಲೀಕರಲ್ಲ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು'' ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಯಡಿಯೂರಪ್ಪ ಹಾಗೂ ಮಕ್ಕಳು, ಈಶ್ವರಪ್ಪ ಹಾಗೂ ಮಗ, ಉಮೇಶ್ ಕತ್ತಿ ಹಾಗೂ ಮಗ ರಮೇಶ್ ಕತ್ತಿ, ಅಮಿತ್ ಶಾ ಹಾಗೂ ಮಗ ಜೈ ಶಾ, ಸುಶ್ಮಾ ಸ್ವರಾಜ್ ಹಾಗೂ ಗಂಡ ಸ್ವರಾಜ್ ಕೌಶಲ್, ಮಹೆಂತ್ ಅವೈಧ್ಯನಾಥ್ ಹಾಗೂ ಸಂಬಂಧಿ ಯೋಗಿ ಆದಿತ್ಯನಾಥ್ ಹೀಗೆ 40 ಕುಟುಂಬಸ್ಥರ ಪಟ್ಟಿ ಮಾಡಿ ಟ್ವೀಟ್ ಮಾಡಿದೆ.
ಹಾಗೆಯೇ, ''ವಂಶಪಾರಂಪರ್ಯ ನಮ್ಮ ಪಕ್ಷದ ಡಿಎನ್ಎನಲ್ಲೇ ಇಲ್ಲ ಎಂದು ಹಸಿ ಸುಳ್ಳು ಹೇಳಿದ ಸಿ.ಟಿ. ರವಿ ಅವರೇ ನಿಮ್ಮ ಪಕ್ಷದಲ್ಲಿ ವಿಶಾಲವಾಗಿ ಬೆಳೆದು ಹರಡಿಕೊಂಡಿರುವ 'ವಂಶವೃಕ್ಷ' ವನ್ನು ಸ್ವಲ್ಪ ನೋಡಿಕೊಳ್ಳಿ. ಇವರೆಲ್ಲರ ಡಿಎನ್ಎ ಬಗ್ಗೆ ನಿಮಗೆ ಅನುಮಾನವಿದೆಯೇ? ಇದ್ದರೆ ಒಮ್ಮೆ ನಿಮ್ಮವರ ಡಿಎನ್ಎ ಪರೀಕ್ಷೆ ಅಭಿಯಾನ ಹಮ್ಮಿಕೊಳ್ಳಿ! ಇಲ್ಲವೇ ಸುಳ್ಳುಗಳನ್ನು ಬಿಡಿ'' ಎಂದು ಟಾಂಗ್ ನೀಡಿದೆ.