ನವದೆಹಲಿ, ಎ.08 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ನಾನು ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡೆ. ಕೊರೊನಾ ವೈರಸ್ ಅನ್ನು ಮಣಿಸಲು ನಮ್ಮ ಎದುರಿರುವ ಕೆಲವು ಆಯ್ಕೆಗಳ ಪೈಕಿ ಕೊರೊನಾ ಲಸಿಕೆಯೂ ಒಂದು. ನೀವು ಲಸಿಕೆ ಪಡೆಯಲು ಅರ್ಹರಾಗಿದ್ದರೆ, ಶೀಘ್ರವೇ ಕೊರೊನಾ ಲಸಿಕೆ ಪಡೆಯಿರಿ. ಲಸಿಕೆಗಾಗಿ ನೋಂದಣಿ ಮಾಡಿಸಿಕೊಳ್ಳಿ" ಎಂದಿದ್ದಾರೆ.
ಏಮ್ಸ್ನಲ್ಲಿ ನರ್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುದುಚೇರಿಯ ಪಿ.ನಿವೇದಾ ಹಾಗೂ ಪಂಜಾಬ್ನ ನಿಶಾ ಶರ್ಮಾ ಅವರು ಪ್ರಧಾನಿ ಮೋದಿ ಅವರಿಗೆ ಲಸಿಕೆ ಹಾಕಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ನಿಶಾ ಶರ್ಮಾ, "ನಾನು ದೇಶದ ಪ್ರಧಾನಿಗೆ ಕೊರೊನಾ ಲಸಿಕೆ ನೀಡಿದ್ದೇನೆ. ನನ್ನ ಜೊತೆ ಪ್ರಧಾನಿ ಮಾತನಾಡಿದರು. ಅವರನ್ನು ಭೇಟಿಯಾಗಿದ್ದು ಹಾಗೂ ಅವರಿಗೆ ಕೊರೊನಾ ಲಸಿಕೆ ನೀಡಿದ್ದು ನನಗೆ ಸ್ಮರಣೀಯ ಕ್ಷಣ" ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಮಾರ್ಚ್ 1ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದರು.