ಬೆಂಗಳೂರು, ಏ. 07 (DaijiworldNews/SM): ಬೇಡಿಕೆ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರವೂ ಮುಂದುವರಿಯಲಿದೆ. ಕೆ.ಎಸ್.ಆರ್.ಟಿ.ಸಿ. ನೌಕರರು ತಮ್ಮ ಹೋರಾಟವನ್ನು ಅನಿರ್ದಿಷ್ಟವಾಗಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಈ ನಡುವೆ ಮುಷ್ಕರವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೆ ತರುವವರೆಗೆ ಹಾಗೂ ಬೇಡಿಕೆ ಈಡೇರುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ನೌಕರರು ಈಗಾಗಲೇ ತಿಳಿಸಿದ್ದಾರೆ. ಮುಷ್ಕರ ನಡೆಸುತ್ತಿರುವ ಆರ್ಟಿಸಿ ನೌಕರರೊಂದಿಗೆ ಯಾವುದೇ ಮಾತುಕತೆಗಳನ್ನು ಸರಕಾರ ತಳ್ಳಿ ಹಾಕಿತ್ತು. ಆದರೆ, ಇದೀಗ ಸರಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಷ್ಕರವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.
"ಸರ್ಕಾರವು ಅವರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಪೂರೈಸಿದೆ ಮತ್ತು ಶೇ 8 ರಷ್ಟು ವೇತನ ಹೆಚ್ಚಳವನ್ನೂ ಘೋಷಿಸಿದೆ. ಈ ಕಠಿಣ ಸಮಯದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸುವುದು ತಪ್ಪು. ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಅವರು ಮುಷ್ಕರವನ್ನು ಕೊನೆಗೊಳಿಸಲಿ ಮತ್ತು ಸರ್ಕಾರದೊಂದಿಗೆ ಮಾತುಕತೆಗೆ ಬರಲಿ”ಎಂದು ತಿಳಿಸಿದ್ದಾರೆ.