ಚಿಕ್ಕಮಗಳೂರು, ಎ.06 (DaijiworldNews/PY): "ಕಾರ್ಮಿಕ ನಾಯಕರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು, ಅರಾಜಕತೆ ಸೃಷ್ಟಿಸುವುದು ಸರಿಯಲ್ಲ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರವನ್ನು ಬೆದರಿಕೆಗಳ ಮುಖೇನ ಮಣಿಸಲು ಆಗದು. ಅಧಿಕ ಒತ್ತಡ ಹೇರಿದಲ್ಲಿ ಸಂಬಂಧ ಮುರಿದುಹೋಗುವುದು ಖಚಿತ" ಎಂದಿದ್ದಾರೆ.
"ಕೊರೊನಾದ ಸಂದರ್ಭ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಹಾನುಭೂತಿ ವ್ಯಕ್ತಪಡಿಸಿದ್ದು. ಮೇ 2ರವರೆಗೆ ಕಾಲವಕಾಶ ನೀಡುವಂತೆ ನೌಕರರಲ್ಲಿ ಮನವಿ ಮಾಡಿದ್ದಾರೆ. ಇನ್ನೊಂದು ತಿಂಗಳು ನೌಕರರು ಸಮಯ ನೀಡಿ, ಮುಷ್ಕರವನ್ನು ಹಿಂತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಯತ್ನಾಳ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "2018ರಲ್ಲಿ ಟಿಕೆಟ್ ನೀಡಿದ ವೇಳೆ ಚರ್ಚೆಯಾದಾಗ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಯತ್ನಾಳ್ ಅವರನ್ನು ಸಮರ್ಥಿಸಿಕೊಂಡಿದ್ದರು. ಯತ್ನಾಳ್ ಹಾಗೂ ಸಿಎಂ ಬಿಎಸ್ವೈ ಅವರ ನಡುವೆ ವ್ಯಕ್ತಿಗತ ಸಂಬಂಧ ಇದ್ದು, ಸಮಸ್ಯೆಯನ್ನು ಅವರೇ ಪರಿಹರಿಸಿಕೊಳ್ಳುತ್ತಾರೆ" ಎಂದಿದ್ದಾರೆ.