ಇಂದೋರ್, ಎ.06 (DaijiworldNews/PY): ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ವ್ಯಕ್ತಿಯೋರ್ವನನ್ನು ಹಿಡಿದು ಬೀದಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಆಟೋ ಚಾಲಕ ಕೃಷ್ಣ ಕೀಯೆರ್ (35) ಎಂಬವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯನ್ನು ಭೇಟಿ ಮಾಡಲು ತೆರಳಿದ್ದರು. ಈ ಸಂದರ್ಭ ಅವರು ಮಾಸ್ಕ್ ಅನ್ನು ಸರಿಯಾಗಿ ಧರಿಸದೇ ಮೂಗಿನ ಕೆಳಗೆ ಜಾರಿಸಿಕೊಂಡಿದ್ದನ್ನು ಮಾರ್ಗ ಮಧ್ಯೆ ಪೊಲೀಸರು ನೋಡಿದ್ದಾರೆ. ಈ ವೇಳೆ ಅವರನ್ನು ತಡೆದ ಪೊಲೀಸರು ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಆದರೆ, ಕೃಷ್ಣ ಅವರು ಠಾಣೆಗೆ ತೆರಳಲು ನಿರಾಕರಿಸಿದ್ದು, ಈ ವೇಳೆ ಪೊಲೀಸರು ಅವರಿಗೆ ಥಳಿಸಿದ್ದಾರೆ.
ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಲದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕೃಷ್ಣಾ ಅವರನ್ನು ನೆಲಕ್ಕೆ ಬೀಳಿಸಿ ಪೊಲೀಸರು ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ್ದಾರೆ. ಈ ಸಂದರ್ಭ ಕೃಷ್ಣಾರ ಜೊತೆ ಇದ್ದ ಅವರ ಮಗ ಹಾಗೂ ತಂದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಯಾರೊಬ್ಬರೂ ಸಹಾಯಕ್ಕೆ ಧಾವಿಸಿಲ್ಲ. ಬದಲಾಗಿ ಫೋಟೋ ವಿಡಿಯೋ ತೆಗೆಯುವುದರಲ್ಲೇ ಮಗ್ನರಾಗಿದ್ದರು.
ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಕಮಲ್ ಪ್ರಜಾಪತ್ ಹಾಗೂ ಧರ್ಮೇಂದ್ರ ಜತ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ದ ಈವರೆಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ವಿಡಿಯೋ ವೈರಲ್ ಆದ ಬಳಿಕ ಇಬ್ಬರನ್ನು ಅಮಾನತು ಮಾಡಲಾಗಿದೆ.