ಮುಜಾಫರ್ನಗರ, ಎ.06 (DaijiworldNews/PY): ಭಾರತೀಯ ಜನತಾ ಪಕ್ಷದ ನಾಯಕಿ ಪ್ರಿಯಂವದಾ ತೋಮರ್ ಅವರು ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಿಯಂವದಾ ತೋಮರ್ ಅವರು ಪಂಚಾಯತ್ ಚುನಾವಣೆಗೂ ಮೊದಲೇ ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯ ಸ್ಥಾನಕ್ಕೂ ಕೂಡಾ ರಾಜೀನಾಮೆ ನೀಡಿದ್ದಾರೆ.
ತೋಮರ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದು, "ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ನಾಲ್ಕು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ, ನಿರ್ಲಕ್ಷಿಸುತ್ತಿದೆ" ಎಂದು ಉಲ್ಲೇಖಿಸಿದ್ದಾರೆ.
"ಬಿಜೆಪಿಯ ರೈತ ವಿರೋಧಿ ನೀತಿಯ ಕಾರಣದಿಂದ ನಾನು ಈ ತೀರ್ಮಾನ ಕೈಗೊಂಡಿದ್ದೇನೆ. ಉತ್ತರಪ್ರದೇಶದ ಮಹಿಳೆಯರನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಅವರ ಆಶಯಗಳನ್ನು ಪೂರೈಸುವಲ್ಲಿ ಕೂಡಾ ಬಿಜೆಪಿ ಸರ್ಕಾರ ವಿಫಲವಾಗಿದೆ" ಎಂದಿದ್ದಾರೆ.