ಬೆಳಗಾವಿ, ಎ.07 (DaijiworldNews/MB) : ರಾಜ್ಯದಲ್ಲಿ ಉಪಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು ಪ್ರಚಾರಕ್ಕಾಗಿ ಬೆಳಗಾವಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರನ್ನು ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಚೆಕ್ಪೋಸ್ಟ್ನಲ್ಲಿ ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈಗ ತಪಾಸಣೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಚುನಾವಣೆ ಪ್ರಚಾರ ಹಿನ್ನೆಲೆ ಬೆಳಗಾವಿಯತ್ತ ತೆರಳಿದ್ದ ಮುಖ್ಯಮಂತ್ರಿಗಳು ಮುತ್ನಾಳ ಗ್ರಾಮದ ಮಠಕ್ಕೆ ಭೇಟಿ ನೀಡಿ ಬಳಿಕ ಹಲಗಾ ಗ್ರಾಮಕ್ಕೆ ತೆರಳಿದ್ದರು. ಹಿರೇಬಾಗೇವಾಡಿ ಬಳಿ ಚೆಕ್ಪೋಸ್ಟ್ನಲ್ಲಿ ಮುಖ್ಯಮಂತ್ರಿಗಳ ಕಾರನ್ನು ಕೂಡಾ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮುಖ್ಯಮಂತ್ರಿ ಅವರು ತಡರಾತ್ರಿವರೆಗೂ ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಿದ್ದು ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು 8 ಹಾಗೂ 9 ರಂದು ದಕ್ಷಿಣ ಕನ್ನಡ ಪ್ರವಾಸ ನಿರ್ಧರಿಸಿದ್ದರು. ಆದರೆ ಈಗ ಅನಿವಾರ್ಯ ಕಾರಣಗಳಿಂದ ಪ್ರವಾಸ ರದ್ದು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆದರೆ ರಸ್ತೆ ಸಂಚಾರದಿಂದಾಗಿ ಮುಖ್ಯಮಂತ್ರಿ ದಣಿದಿದ್ದಾರೆ ಎಂದು ಹೇಳಲಾಗಿದೆ.