ಉತ್ತರಪ್ರದೇಶ, ಎ.06 (DaijiworldNews/PY): ಎರಡು ವರ್ಷಗಳಿಂದ ಪಂಜಾಬ್ನ ರೂಪ್ನಗರ ಜೈಲಿನಲ್ಲಿದ್ದ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಪೊಲೀಸರು ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಬಾಂದಾ ಜೈಲಿಗೆ ಕರೆತಂದಿದ್ದಾರೆ.
ಅನ್ಸಾರಿಯನ್ನು ರೂಪ್ನಗರದಿಂದ ಆಂಬುಲೆನ್ಸ್ನ ಮೂಲಕ ಬಾಂದಾ ಜೈಲಿಗೆ ಕರೆತರಲಾಗಿದ್ದು, ಅಂಬುಲೆನ್ಸ್ಗೆ ಉತ್ತರ ಪ್ರದೇಶದ ಪೊಲೀಸರಿದ್ದ ವಾಹನಗಳಿಂದ ಭದ್ರತೆ ನೀಡಲಾಗಿತ್ತು.
"ಕೊಠಡಿ ಸಂಖ್ಯೆ 15ರಲ್ಲಿ ಅನ್ಸಾರಿಯನ್ನು ಇರಿಸಲಾಗಿದೆ. ಜೈಲಿನ ಒಳಗೆ ಹಾಗೂ ಹೊರಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅನ್ಸಾರಿ ಇರುವ ಕೊಠಡಿಯ ಬಳಿ ಜೈಲಿನಲ್ಲಿರುವ ಇತರೆ ಕೈದಿಗಳಿಗೆ ತೆರಳಲು ಅವಕಾಶವಿಲ್ಲ" ಎಂದು ಬಾಂದಾ ಜೈಲರ್ ಪ್ರಮೋದ್ ತಿವಾರಿ ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರಿಗೆ ಅನ್ಸಾರಿಯನ್ನು ಹಸ್ತಾಂತರಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸುಪ್ರೀಂನ ಆದೇಶ ಮೇರೆಗೆ ರೂಪ್ನಗರ ಜೈಲಿನಲ್ಲಿದ್ದ ಅನ್ಸಾರಿಯನ್ನು ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
"ಬಾಂದಾಕ್ಕೆ ಬರುವ ದಾರಿಯ ನಡುವೆ ಅನ್ಸಾರಿ ಇದ್ದ ವಾಹನಕ್ಕೆ ಭದ್ರತೆಗೆಂದು ನಿಯೋಜನೆಗೊಂಡಿದ್ದ ವಾಹನಗಳು ಸತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 1.30ರ ವೇಳೆ ತಂಗಿದ್ದವು. ಇದು ಊಹಾಪೋಹಕ್ಕೆ ಕಾರಣವಾಗಿತ್ತು. ಬಳಿಕ, ಅನ್ಸಾರಿ ಮೂತ್ರ ವಿಸರ್ಜನೆಗಾಗಿ ಕೇಳಿದಾಗ ಕೆಲ ಹೊತ್ತು ಇಲ್ಲಿ ವಾಹನಗಳು ತಂಗಿದ್ದವು" ಎಂದು ಸತ್ತಿ ಠಾಣೆ ಅಧಿಕಾರಿ ಕಪಿಲ್ ದುಬೆ ತಿಳಿಸಿದ್ದಾರೆ.