ಬೆಂಗಳೂರು, ಎ.06 (DaijiworldNews/PY): ಆರನೇ ವೇತನ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಯುತ್ತಿದ್ದು, ಸಾರಿಗೆ ನೌಕರರ ವೇತನ ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮದ ವಿರುದ್ದ ಕಾಂಗ್ರೆಸ್ ಕೆಂಡಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಾರಿಗೆ ನೌಕರರ ವೇತನ ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ. ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಇಷ್ಟೊಂದು ದ್ವೇಷ ಮಾಡಲು ಸಾರಿಗೆ ನೌಕರರೇನು ಪಾಕಿಸ್ತಾನದವರೇ? ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು" ಎಂದಿದೆ.
"ನೌಕರರಿಗೆ ಖಾಸಗಿ ಬಸ್ಗಳ ಬೆದರಿಕೆ ತೋರಿಸುತ್ತಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೇ, ಸಾರ್ವಜನಿಕರ ಹಿತವನ್ನು ಯೋಚಿಸಿದ್ದೀರಾ? ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ದರ ಸುಲಿಗೆಗೆ ನಿಯಂತ್ರಣ ಹೇರಿದ್ದೀರಾ? ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಂಡಿದ್ದೀರಾ?. ಬಿಜೆಪಿ ಸರ್ಕಾರಕ್ಕೆ ನೌಕರರ ಹಿತವೂ ಬೇಕಿಲ್ಲ, ಜನರ ಸುರಕ್ಷತೆಯೂ ಬೇಕಿಲ್ಲ" ಎಂದು ಕಿಡಿಕಾರಿದೆ.
ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ, ಅಧಿಕಾರಿಗಳು ಎಷ್ಟು ಮನವಿ ಮಾಡಿದರೂ ಮುಷ್ಕರದ ನಿರ್ಧಾರದಿಂದ ಹಿಂಜರಿಯದ ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ನೀಡಲು ನಿರ್ಧರಿಸಿದ್ದು, ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನ ತಡೆಯಲು ತೀರ್ಮಾನಿಸಿದೆ.