ಬೆಂಗಳೂರು, ಎ.07 (DaijiworldNews/MB) : ''ಕಥೆ ಕಟ್ಟುವುದರಲ್ಲಿ ಎಕ್ಸ್ಪರ್ಟ್ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪದ್ಮಶ್ರೀ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು. ವಿರೋಧ ಪಕ್ಷದ ನಾಯಕರು ಇದ್ದಾರೋ ಎಂದು ತಿಳಿಯುವುದಿಲ್ಲ'' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ವಿರುದ್ದ ರಾಜ್ಯಪಾಲರು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದ ಈಶ್ವರಪ್ಪನವರು ಬುಧವಾರ ಪತ್ರಿಕಾಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಆದರೆ ಇಂದು ಈಶ್ವರಪ್ಪನವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನ ವಿರುದ್ದ ವಾಗ್ದಾಳಿ ನಡೆಸಿದರು.
''ಸಿದ್ದರಾಮಯ್ಯ ಅವರನ್ನು ಹೇಳುವವರು ಯಾರೂ ಇಲ್ಲ ಕೇಳುವವರು ಯಾರೂ ಇಲ್ಲ ಎಂಬಂತೆ ಆಗಿದೆ. ರಾಜೀನಾಮೆ ನೀಡಬೇಕು ನಾನೋ ಅವರೋ ಎಂದು ಅವರೇ ನಿರ್ಧಾರ ಮಾಡಿಕೊಳ್ಳಲಿ'' ಎಂದು ತಿರುಗೇಟು ನೀಡಿದರು.
''ನನ್ನನ್ನು ಸಿದ್ದರಾಮಯ್ಯ ನಾಮ್ಕೆವಾಸ್ಥೆ ಸಚಿವ ಎಂದು ವ್ಯಂಗ್ಯ ಮಾಡಿದ್ದರು. ಆದರೆ ನನ್ನ ಇಲಾಖೆಯಿಂದ ಆಗಿರುವ ಕಾರ್ಯಗಳು ಇನ್ನೂ ಅವರ ಗಮನಕ್ಕೆಯೇ ಬಂದಿಲ್ಲ. ಅವರು ಕಥೆ ಕಟ್ಟುವುದರಲ್ಲಿ ಎಕ್ಸ್ಪರ್ಟ್, ಅವರಿಗೆ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ ಕೊಡಬೇಕು'' ಎಂದು ಲೇವಡಿ ಮಾಡಿದರು.
''ನನಗೆ ಉದ್ಯೋಗವಿದೆ. ಆದರೆ ಪಾಪ ಅವರಿಗೆ ಉದ್ಯೋಗವಿಲ್ಲ, ಅದಕ್ಕೆ ಸಿಎಂ ಬದಲಾವಣೆ ಆಗ್ತಾರೆ ಎಂದು ಕಥೆ ಕಟ್ಟಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಕ್ಷೇತ್ರವಾದ ಮೈಸೂರಿನಲ್ಲಿ ಅವರನ್ನು ಬಿಟ್ಟು ಅವರ ಪಕ್ಷ ಚುನಾವಣೆ ಎದುರಿಸಿದೆ. ಅವರ ಪಕ್ಷದವರೇ ಅವರನ್ನು ತಿರಸ್ಕರಿಸುತ್ತಿದ್ದಾರೆ'' ಎಂದು ಹೇಳಿದರು.
ಇನ್ನು ಸಿಎಂ ವಿರುದ್ದದ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ನಮ್ಮ ಪಕ್ಷದ ವಿಚಾರವನ್ನು ನಾನು ಸಿಟಿ ರವಿ ಅವರಿಗೆ ತಿಳಿಸದೆ ದೇವೇಗೌಡರಿಗೆ ತಿಳಿಸಲಾ'' ಎಂದು ಪ್ರಶ್ನಿಸಿದ್ದು, ''ನಾನು ದೂರು ನೀಡಿಲ್ಲ, ಸಲಹೆ ಪಡೆದಿದ್ದೇನೆ ಅಷ್ಟೇ. ರಾಜ್ಯಪಾಲರಿಗೆ ನೀಡಿದ ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಅವರಿಗೂ ನೀಡಿದ್ದೇನೆ. ನನ್ನ ಕುತ್ತಿಗೆ ಕೊಯ್ದರು ನಾನು ನನ್ನ ಪಕ್ಷದ ವಿರುದ್ದವಾಗಿ ಮಾತನಾಡಲ್ಲ. ಪಕ್ಷವನ್ನು ಟೀಕೆ ಮಾಡಲ್ಲ'' ಎಂದರು. ಅನುದಾನ ವಿಚಾರದಲ್ಲಿ ಮಾತನಾಡಿ, ''ನಿಯಮದ ಪ್ರಕಾರ ಅನುದಾನ ನೇರವಾಗಿ ಸಿಎಂ ನಿರ್ವಹಣೆ ಮಾಡುವುದಿಲ್ಲ. ಆಯಾ ಇಲಾಖೆಗೆ ಅನುದಾನ ನೀಡಬೇಕು. ಸಚಿವರು ಅನುದಾನ ಹಂಚಿಕೆ ಮಾಡುವುದು'' ಎಂದರು.
ಈ ವೇಳೆಯೇ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಯತ್ನಾಳ್ ಬಳಿ ಸಿಎಂ ಹಾಗೂ ವಿಜಯೇಂದ್ರ ಅವರ ವಿರುದ್ದ ದಾಖಲೆ ಇದ್ದರೆ ಅದನ್ನು ನೀಡಿ ಆರೋಪ ಮಾಡಲಿ'' ಎಂದು ಹೇಳಿದರು.