ಚಿಂತಾಮಣಿ, ಎ.06 (DaijiworldNews/PY): ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಗಲಾಟೆ ನಡೆದಿದ್ದು, ಇಬ್ಬರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಚಿಕ್ಕಾಬಳ್ಳಾಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಪುತ್ರ ಆಂಜಪ್ಪ (55) ಹಾಗೂ ವಿಷ್ಣು (14) ಎಂದು ಗುರುತಿಸಲಾಗಿದೆ. ಅಶ್ವಥ್ ನಾರಾಯಣ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಸೇರಿಸಲಾಗಿದೆ.
ನಗರದ ಶ್ರೀರಾಮನಗರದಲ್ಲಿ ಸೀನಪ್ಪ ಎಂಬವರು ಕಟ್ಟಡವೊಂದನ್ನು ಬಾಡಿಗೆ ನೀಡಿದ್ದು, ಕಟ್ಟಡದ ಬಾಡಿಗೆಯನ್ನು ತಂದೆ-ತಾಯಿಯೊಂದಿಗೆ ಅಶ್ವತ್ಥನಾರಾಯಣ ಮಾತ್ರ ಬಾಡಿಗೆ ಹಣವನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ಸೀನಪ್ಪ ಅವರ ಪುತ್ರರಾದ ಅಂಜಪ್ಪ ಹಾಗೂ ಅಶ್ವತ್ಥ ನಾರಾಯಣ ಅವರ ಮಧ್ಯೆ ಗಲಾಟೆ ನಡೆದಿದ್ದು, ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದಾರೆ. ಈ ವೇಳೆ ವಿಷ್ಣು ಸ್ಥಳದಲ್ಲೇ ಸಾವನ್ನಪ್ಪಿದು, ಅಂಜಪ್ಪ ಕೋಲಾರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ನಗರದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತಪಟ್ಟ ಅಂಜಪ್ಪನಿಗೆ ಮೂವರು ಗಂಡು ಮಕ್ಕಳಿದ್ದು, ಈ ಪೈಕಿ ಮೃತ ವಿಷ್ಣುವನ್ನು ಅಶ್ವತ್ಥ ನಾರಾಯಣ ದತ್ತು ಪಡೆದಿದ್ದರು ಎನ್ನಲಾಗಿದೆ.