ಬೆಂಗಳೂರು, ಏ 7 (DaijiworldNews/MS): ಅಶ್ಲೀಲ ಸಿಡಿ ಹಗರಣದಲ್ಲಿ ಸಿಲುಕಿ ಎಸ್ಐಟಿ ವಿಚಾರಣೆಗೆ ಒಳಗಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಉಸಿರಾಟದ ತೊಂದರೆ ಹಾಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಹೋಮ್ಕ್ವಾರಂಟೈನ್ಗೆ ಒಳಗಾಗಿರುವ ಅವರು, ಒಂದು ವಾರದ ಬಳಿಕ ವಿಶೇಷ ತನಿಖಾ ತಂಡ(ಎಸ್ಐಟಿ)ದ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ರಮೇಶ್ ಜಾರಕಿಹೊಳಿ ನಡೆಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, ಕಳ್ಳನೊಬ್ಬ ನನಗೆ ಕೊರೊನಾ ಬಂದಿದೆ. ನನ್ನನ್ನು ಮುಟ್ಟಬೇಡಿ ಎಂದು ಪೊಲೀಸರಿಗೆ ಹೇಳಿದಂತೆ, ಅತ್ಯಾಚಾರ ಆರೋಪಿಯು ಕೊರೊನಾವನ್ನು ರಕ್ಷಣಾತ್ಮಕ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಆರೋಪಿಸಿದೆ.
ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಆರೋಪಿಗೆ ಕೊರೊನಾ ರಕ್ಷಣಾತ್ಮಕ ಅಸ್ತ್ರ ಅನ್ನೋದು ಸ್ಪಷ್ಟ. ಇದರ ನಡುವಲ್ಲಿ ಸಿಡಿ ಹೇಗೆ ಬಂದಿದೆಯೋ, ಹಾಗೆಯೇ ವಾಪಸ್ ಹೋಗುತ್ತೆ. ಇದು ಸಿಡಿ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ಎಂದು ವ್ಯಂಗ್ಯವಾಡಿದೆ. ಇಷ್ಟಲ್ಲದೆ #ArrestRapistRamesh ಎಂಬ ಹ್ಯಾಶ್ಟ್ಯಾಗ್ ಬಳಸುವ ಮೂಲಕ ನೇರವಾಗಿ ರಮೇಶ್ ಜಾರಕಿಹೊಳಿ ಅವರ ಮೇಲೆಯೇ ಪ್ರಹಾರ ಮಾಡಿದೆ.