ನವದೆಹಲಿ, ಎ.07 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆ ಕಾಣುತ್ತಿದೆ. ಏತನ್ಮಧ್ಯೆ ''ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು'' ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಒಬ್ಬರೇ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸಿಲ್ಲವೆಂದು ದಂಡ ಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ಅವರು, ಈ ತೀರ್ಪನ್ನು ಪ್ರಕಟಿಸಿದರು.
''ಒಬ್ಬ ವ್ಯಕ್ತಿಯು ಕಾರಿನಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುತ್ತಿದ್ದರೂ ಮಾಸ್ಕ್ ಕಡ್ಡಾಯ'' ಎಂದು ಹೇಳಿರುವ ದೆಹಲಿ ಹೈಕೋರ್ಟ್, ಯಾವುದೇ ವಾಹನವೂ ಕೊರೊನಾ ನಿಯಮಕ್ಕೆ ಒಳಪಡುವ "ಸಾರ್ವಜನಿಕ ಸ್ಥಳ" ಎಂದು ಸಂಬೋಧಿಸಿದೆ. ಹಾಗೆಯೇ ಮಾಸ್ಕ್ ಧರಿಸುವುದು ಆ ವ್ಯಕ್ತಿಗೆ ಹಾಗೂ ಸುತ್ತಮುತ್ತಲಿನವರಿಗೆ "ಸುರಕ್ಷಾ ಕವಚ" ಎಂದು ನ್ಯಾಯಾಲಯ ಹೇಳಿದೆ.
"ನೀವು ಕಾರಿನಲ್ಲಿ ಏಕಾಂಗಿಯಾಗಿದ್ದರೂ, ಮಾಸ್ಕ್ ಧರಿಸಲು ಏಕೆ ಆಕ್ಷೇಪಿಸುತ್ತೀರಿ? ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ. ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ ಎಲ್ಲರೂ ಮಾಸ್ಕ್ ಧರಿಸಬೇಕು" ಎಂದು ಕೋರ್ಟ್ ಹೇಳಿದೆ.
"ಟ್ರಾಫಿಕ್ ಸಿಗ್ನಲ್ನಲ್ಲಿ ಕಾರು ನಿಂತಾಗ, ಚಾಲಕರು ಆಗಾಗ್ಗೆ ಕಿಟಕಿಯಿಂದ ಹೊರ ತಲೆಹಾಕಿ ನೋಡುತ್ತಾರೆ. ಕೊರೊನಾ ಎಷ್ಟು ಸಾಂಕ್ರಾಮಿಕವಾಗಿದೆ ಎಂದರೆ ಆ ಸಮಯದಲ್ಲಿಯೂ ಯಾರಾದರೂ ಸೋಂಕಿಗೆ ಒಳಗಾಗಬಹುದು" ಎಂದು ಕೋರ್ಟ್ ಅಭಿಪ್ರಾಯಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ತೀವ್ರಗತಿಲ್ಲಿ ಹರಡುತ್ತಿದೆ. ದೆಹಲಿಯಲ್ಲಿ ಒಂದೇ ದಿನ 5,100 ಕೊರೊನಾ ಪ್ರಕರಣಗಳು ದೃಢವಾದ ಒಂದು ದಿನದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ. ಭಾರತದಲ್ಲಿ ಪ್ರಸ್ತುತ 1 ಕೋಟಿ 28 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. 1,66,177 ಮಂದಿ ಸಾವನ್ನಪ್ಪಿದ್ದಾರೆ.