ನವದೆಹಲಿ, ಏ 7 (DaijiworldNews/MS):ಕೊರೊನಾ ವೈರಸ್ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು ಇಂತಹ ಸಂದರ್ಭದಲ್ಲಿಹಾಗೂ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.
ಏಪ್ರಿಲ್ 5 ರಂದು ಪ್ರಾರಂಭವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆ ಇಂದು ಮುಕ್ತಾಯಗೊಂಡಿದೆ. ಕೇಂದ್ರ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ, ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಆರ್ಬಿಐ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ ತಡೆಹಿಡಿಯುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.ಇದೇ ವೇಳೆ 2021-22ನೇ ಸಾಲಿನಲ್ಲಿ ಶೇಕಡಾ 10.5 ಜಿಡಿಪಿಯನ್ನು ಅಂದಾಜು ಮಾಡಲಾಗಿದೆ.