ಬೆಂಗಳೂರು, ಎ.07 (DaijiworldNews/MB) : ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ, ಅಧಿಕಾರಿಗಳು ಎಷ್ಟು ಮನವಿ ಮಾಡಿದರೂ ಮುಷ್ಕರದ ನಿರ್ಧಾರದಿಂದ ಹಿಂಜರಿಯದ ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ನೀಡಲು ನಿರ್ಧರಿಸಿದೆ.
ಇಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು ಯಾವುದೇ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ರಸ್ತೆಗೆ ಇಳಿದಿಲ್ಲ. ಈ ಹಿನ್ನೆಲೆ ಸರ್ಕಾರದ ಮನವಿಗೆ ಕಿವಿಗೊಡದ ನೌಕರರಿಗೆ ಶಾಕ್ ನೀಡಲು ಮುಂದಾಗಿರುವ ಸರ್ಕಾರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನ ತಡೆಯಲು ನಿರ್ಧರಿಸಿದೆ.
ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರು ಮಾಹಿತಿ ನೀಡಿದ್ದಾರೆ. ''ಸಾರಿಗೆ ನೌಕರರು ಕೆಲಸಕ್ಕ ಹಾಜರಾಗದಿದ್ದರೆ ಮಾರ್ಚ್ ತಿಂಗಳ ಸಂಬಳ ಕಡಿತ ಮಾಡುತ್ತೇವೆ. ನೊ ವರ್ಕ್, ನೊ ಪೇ'' ಎಂದು ಹೇಳಿದ್ದಾರೆ.
ಸಾರಿಗೆ ನಿಗಮವು ಪ್ರತಿ ತಿಂಗಳು 10ನೇ ತಾರೀಖಿನೊಳಗೆ ನೌಕರರಿಗೆ ವೇತನ ನೀಡುತ್ತಿದ್ದವು. ಈ ಬಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಸರ್ಕಾರ ವೇತನ ತಡೆಹಿಡಿಯಲು ನಿರ್ಧರಿಸಿದೆ. ಎಲ್ಲಿಯವರೆಗೂ ಸಾರಿಗೆ ನೌಕರರು ಮುಷ್ಕರ ಕೈಬಿಡುವುದಿಲ್ಲವೋ ಅಲ್ಲಿಯವರೆಗೂ ಸಂಬಳ ನೀಡಬಾರದು ಸಾರಿಗೆ ನಿಗಮಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ.