ಶಿರಸಿ, ಎ.07 (DaijiworldNews/MB) : ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಕರೆ ಬಂದಿದೆ ಎಂದು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಮಂಗಳವಾರ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಕೆಎಚ್ಬಿ ಕಾಲೋನಿ ನಿವಾಸದಲ್ಲಿ ಇದ್ದ ಸಂಸದರ ಸ್ಥಿರ ದೂರವಾಣಿಗೆ ಸೋಮವಾರ ತಡರಾತ್ರಿ 2 ಗಂಟೆ ಕರೆ ಬಂದಿದೆ. ಮೊದಲ ಸಲ ಕರೆ ಬಂದಾಗ ಸಂಸದರು ಸ್ವೀಕರಿಸಿರಲಿಲ್ಲ. ನಂತರ ಮತ್ತೊಮ್ಮೆ ಕರೆ ಬಂದಿದ್ದು ಆಗ ಸಂಸದರು ಸ್ವೀಕರಿಸಿದ್ದಾರೆ. ಈ ಸಂದರ್ಭ ಕರೆಯಲ್ಲಿ ಮಾತನಾಡಿದ ವ್ಯಕ್ತಿ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಕರೆ ಮಾಡಿದ ವ್ಯಕ್ತಿಯು ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ ಎಂದು ಹೇಳಲಾಗಿದೆ. ಈ ಹಿಂದೆ ಫೋನ್ ಕರೆ ಮಾಡಿದಾಗ ನೀನು ಪೊಲೀಸರಿಗೆ ದೂರು ನೀಡಿದ್ದಿ. ಪತ್ರಿಕೆಗಳಿಗೂ ಮಾಹಿತಿ ನೀಡಿದ್ದಿ. ಈ ಬಾರಿಯೂ ದೂರು ನೀಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುಮಾರು ಎರಡು ನಿಮಿಷ ಬೆದರಿಕೆ ಹಾಕಿ ಮಾತನಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗೆಯೇ ಈ ದೂರಿನಲ್ಲಿ ಬೆದರಿಕೆ ಕರೆ ಬಂದಿರುವ ಹನ್ನೊಂದು ಅಂಕಿಗಳಿರುವ ಸಂಖ್ಯೆಯನ್ನು ಪೊಲೀಸರಿಗೆ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕುವ ಪೋಸ್ಟ್ಗಳು ತನ್ನ ಹೇಳಿಕೆಗಳಿಂದಲ್ಲೇ ಸುದ್ದಿಯಾಗುತ್ತಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಈಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಈಗ ವೈದ್ಯರ ಸಲಹೆಯಂತೆ ವಿಶ್ರಾಂತಿಯಲ್ಲಿದ್ದಾರೆ.