ಹುಬ್ಬಳ್ಳಿ, ಎ.07 (DaijiworldNews/MB) : ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಮಂಗಳವಾರ ನಡೆದಿದ್ದು ಗಂಭೀರ ಸ್ಥಿತಿಯಲ್ಲಿರುವ ಮಹಿಳೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗರಗ ಗ್ರಾಮದಲ್ಲಿ ವಾಸಿಸುತ್ತಿರುವ ಮಹಿಳೆ ಶ್ರೀದೇವಿ ವೀರಪ್ಪ ಕಮ್ಮಾರ ಅವರ ಪತಿಗೆ ಅನಾರೋಗ್ಯವಿದ್ದು ಇಬ್ಬರು ಮಕ್ಕಳೂ ಇದ್ದಾರೆ. ಕಳೆದ ವರ್ಷ ಉಂಟಾದ ಭಾರಿ ಪ್ರವಾಹದಿಂದಾಗಿ ಮಹಿಳೆಯ ಮನೆಯು ಕುಸಿದು ಬಿದ್ದಿದ್ದು ಸರ್ಕಾರದಿಂದ 50,000 ರೂ. ಮಾತ್ರ ಪರಿಹಾರ ಲಭಿಸಿದೆ. ಈ ಹಣದಲ್ಲಿ ರಿಪೇರಿಯನ್ನೂ ಕೂಡಾ ಸರಿಯಾಗಿ ಮಾಡಲಾಗದ ಕಾರಣ ಮಹಿಳೆ ಹೆಚ್ಚಿನ ಪರಿಹಾರವನ್ನು ಕೋರಿ ಸಂಸದ ಜೋಶಿ ಮತ್ತು ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಅವರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಮಹಿಳೆಗೆ ಸಚಿವರನ್ನು ಭೇಟಿಯಾಗಲು ಅವಕಾಶ ದೊರೆಯದ ಕಾರಣ ನೊಂದು ಕೇಂದ್ರ ಸಚಿವರ ಮನೆಯ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನು ಮಹಿಳೆ ವಿಷ ಸೇವಿಸುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಇದರಲ್ಲಿ ''ಕಳೆದ 5-6 ತಿಂಗಳುಗಳಿಂದ ನಾನು ಎಷ್ಟು ಪ್ರಯತ್ನಿಸಿದರೂ ಸಂಸದರನ್ನು ಭೇಟಿಯಾಗಲು ಆಗಲಿಲ್ಲ. ಶಾಸಕ ಅಮೃತ್ ದೇಸಾಯಿ ಅವರನ್ನು ಭೇಟಿಯಾದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಸಂಸದರನ್ನು ಭೇಟಿ ಮಾಡುವಂತೆ ಹೇಳಿದ್ದರು'' ಎಂದು ಉಲ್ಲೇಖಿಸಲಾಗಿದೆ.
''ನಾನು ವಿಷ ಕುಡಿದಿದ್ದೇನೆ ನನಗೆ ಸಹಾಯ ಮಾಡಿ'' ಎಂದು ಸಂಸದ ಜೋಶಿ ಅವರ ಬಳಿ ಮಹಿಳೆ ಬೇಡಿಕೊಂಡಿದ್ದು ಈ ವೇಳೆ ಮಹಿಳೆಯನ್ನು ಹೊರಗೆ ಕಳುಹಿಸಲು ಜೋಶಿ ಅವರು ತಮ್ಮ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಬಳಿಕ ಮಹಿಳೆಯನ್ನು ಪೊಲೀಸರು ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ವಿಚಾರದಲ್ಲಿ ಇನ್ನೂ ಕೂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಏತನ್ಮಧ್ಯೆ ಧಾರವಾಡ ತಹಶೀಲ್ದಾರ್ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದು ಇದರಲ್ಲಿ, ''ಕಮ್ಮಾರ ಅವರ ಮನೆ ಭಾಗಶಃ ಕುಸಿದಿದೆ (ಶೇಕಡಾ 25 ಕ್ಕಿಂತ ಕಡಿಮೆ) ಮತ್ತು 'ಸಿ' ವರ್ಗದ ಪರಿಹಾರದ ಅಡಿಯಲ್ಲಿ ಬರುತ್ತದೆ. ಸರ್ಕಾರ ಅವರಿಗೆ ಈಗಾಗಲೇ 50,000 ರೂ. ಪರಿಹಾರ ಒದಗಿಸಿದೆ'' ಎಂದು ತಿಳಿಸಿದ್ದಾರೆ.