ಬೆಂಗಳೂರು, ಎ.07 (DaijiworldNews/MB) : ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ಮೊಕದ್ದಮೆಯೊಂದು ದಾಖಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಈ ಖಾಸಗಿ ಮೊಕದ್ದಮೆ ಅರ್ಜಿ ಸಲ್ಲಿಸಿದೆ. ಸಿಡಿ ಪ್ರಕರಣದಲ್ಲಿ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರೂ ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪದಲ್ಲಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ ಖಾಸಗಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 16 ರಂದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರು ರಮೇಶ ಜಾರಕಿಹೊಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ನೀಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಆಧಾರದಲ್ಲಿ ಪೊಲೀಸ್ ಆಯುಕ್ತ ಕಮಲ್ಪಂತ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಬಿ. ಮಾರುತಿ ಎಫ್ಐಆರ್ ದಾಖಲಿಸದೆ ದೂರು ನೀಡಿದ ದಿನೇಶ್ ಕಲ್ಲಹಳ್ಳಿಯನ್ನೇ ವಿಚಾರಣೆಗೆ ಒಳಪಡಿಸಿದ್ದರು ಎಂದು ಈ ಮೊಕದ್ದಮೆಯಲ್ಲಿ ದೂರಲಾಗಿದೆ. ನ್ಯಾಯಾಲಯವು ಈ ಮೊಕದ್ದಮೆಯನ್ನು ಅಂಗೀಕರಿಸಿದ್ದು ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ.