ಗೋಕಾಕ್, ಎ.07 (DaijiworldNews/MB) : ಸಿಡಿ ಪ್ರಕರಣದಲ್ಲಿ ಭಾರೀ ಸುದ್ದಿಯಾಗಿದ ಬಳಿಕ ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬುಧವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.
ಏಪ್ರಿಲ್ 1ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಏಪ್ರಿಲ್ 4ರಂದು ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿಯೇ ಕ್ವಾರಂಟೈನ್ ಆಗಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಆಸ್ಪತ್ರೆಯಲ್ಲಿದ್ದ ರಮೇಶ್ ಜಾರಕೊಹೊಳಿ ಅವರಿಗೆ ಕೊರೊನಾ ನೆಗೆಟಿವ್ ವರದಿ ಬರುವ ಮುನ್ನವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು ತಮ್ಮ ಮನೆಯ ಪ್ರತ್ಯೇಕ ಕೊಠಡಿಯಲ್ಲಿ 10 ದಿನಗಳ ಕ್ವಾರಂಟೈನ್ನಲ್ಲಿ ಇರಲು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಯುವತಿಯೊಬ್ಬರಿಗೆ ನಂಬಿಸಿ ಲೈಂಗಿಕವಾಗಿ ಆಕೆಯನ್ನು ದುರ್ಬಳಕೆ ಮಾಡಿದ ಆರೋಪವನ್ನು ರಮೇಶ್ ಜಾರಕಿಹೊಳಿ ಅವರು ಎದುರಿಸುತ್ತಿದ್ದಾರೆ. ಮಾರ್ಚ್ 3ರಂದು ರಮೇಶ್ ಹಾಗೂ ಆ ಯುವತಿಯದ್ದು ಎಂದು ಹೇಳಲಾದ ಅಶ್ಲೀಲ ಸಿಡಿಯೊಂದು ಬಿಡುಗಡೆಯಾಗಿದ್ದು ಈ ಹಿನ್ನೆಲೆ ರಮೇಶ್ ಜಾರಕಿಹೊಳಿ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಈ ಪ್ರಕರಣವನ್ನು ಎಸ್ಐಟಿ ಹಾಗೂ ನ್ಯಾಯಾಲಯದಲ್ಲಿ ತನಿಖೆ ನಡೆಸಲಾಗುತ್ತಿದೆ. ಏತನ್ಮಧ್ಯೆ ಆರೋಗ್ಯದ ನೆಪವೊಡ್ಡಿ ರಮೇಶ್ ಜಾರಕಿಹೊಳಿ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಯುವತಿ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಕೆ.ಎನ್. ಜಗದೀಶ್ ಅವರು ಆರೋಪಿಸಿದ್ದಾರೆ.