ಉನ್ನಾವೊ, ಎ.06 (DaijiworldNews/MB) : ಲಕ್ನೋದ ಕಾಕೋರಿ ಪ್ರದೇಶದ ವ್ಯಕ್ತಿಯೊಬ್ಬನನ್ನು ಕಳ್ಳನೆಂಬ ಅನುಮಾನದ ಮೇಲೆ ಉನ್ನಾವೊದ ಹಳ್ಳಿಯಲ್ಲಿ ಥಳಿಸಿ ಹತ್ಯೆಗೈಯಲಾಗಿದೆ.
ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಂಗರ್ಮೌ, ಸರ್ಕಲ್ ಅಧಿಕಾರಿ ಅಂಜನಿ ಕುಮಾರ್ ಸಿಂಗ್ ಹೇಳಿದ್ದಾರೆ. ಹಾಗೆಯೇ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೂಡಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮೃತ ಅನಿಸ್ ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ ಸ್ಥಳೀಯ ನಿವಾಸಿಗಳು ಆತನನ್ನು ಕಳ್ಳನೆಂದು ಶಂಕಿಸಿ ತೀವ್ರವಾಗಿ ಥಳಿಸಿದ್ದಾರೆ.
ಬಳಿಕ ಪೊಲೀಸರಿಗೆ ತೀವ್ರವಾಗಿ ಗಾಯಗೊಂಡಿರುವ ಅಪರಿಚಿತ ವ್ಯಕ್ತಿ ಬೆಹ್ತಾ ಮುಜಾವರ್ ಗ್ರಾಮದಲ್ಲಿ ಕಂಡು ಬಂದಿರುವ ಬಗ್ಗೆ ಮಾಹಿತಿ ಲಭಿಸಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ಬಂಗರ್ಮೌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸಂತ್ರಸ್ತ ಈ ಪ್ರದೇಶಕ್ಕೆ ಏಕೆ ಹೋಗಿದ್ದ ಎಂದು ತಿಳಿಯುವ ಯತ್ನ ಪೊಲೀಸರು ನಡೆಸುತ್ತಿದ್ದಾರೆ. ಏತನ್ಮಧ್ಯೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಮೃತನ ತಂದೆ ರಾಯೀಸ್ ಒತ್ತಾಯಿಸಿದ್ದಾರೆ.
ಬೆಹ್ತಾ ಮುಜಾವರ್ ಪ್ರದೇಶಕ್ಕೆ ಹೋಗಿದ್ದಾಗ ನಿರಪರಾಧಿ ಆಗಿರುವ ನನ್ನ ಮಗನಿಗೆ ಥಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪಡೆಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.