ಮುಂಬೈ, ಎ.06 (DaijiworldNews/MB) : ಎನ್ಸಿಪಿ ಮುಖಂಡ ಅನಿಲ್ ದೇಶ್ ಮುಖ್ ವಿರುದ್ದ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಬಾಂಬೆ ಹೈಕೋರ್ಟ್ ಆದೇಶಿಸಿ ನೀಡಿದ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ ಎಂದು ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಿದ ಬಳಿಕ ನೂತನ ಗೃಹ ಸಚಿವರಾಗಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ದಿಲಿಪ್ ವಾಲ್ಸೆ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಲ್ಸೆ ಪಾಟೀಲ್, ಈ ವಿಚಾರದಲ್ಲಿ ಸಿಬಿಐ ತನಿಖೆಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತದೆ. ಬಾಂಬೆ ಹೈಕೋರ್ಟ್ ತೀರ್ಪುನ್ನು ಸುಪ್ರೀಂನಲ್ಲಿ ಸರ್ಕಾರ ಪ್ರಶ್ನಿಸಲಿದೆ ಎಂದು ಹೇಳಿದರು.
''ದೇಶ್ಮುಖ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ವರ್ಗಾವಣೆ ಮತ್ತು ಪೋಸ್ಟಿಂಗ್ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಝೆ ಅವರಲ್ಲಿ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ಹೇಳಿದ್ದಾರೆ'' ಎಂದು ಪರಮ್ ಬಿರ್ ಸಿಂಗ್ ಆರೋಪಿಸಿ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ''ಈ ಪ್ರಕರಣ ಗಂಭೀರವಾದುದು ಆದರೆ ಹೈಕೋರ್ಟ್ಗೆ ಹೋಗಿ'' ಎಂದು ಹೇಳಿತ್ತು.
ಬಳಿಕ ಪರಮ್ ಬೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದು ಹೈಕೋರ್ಟ್ ''ಇದು ಸ್ವತಂತ್ರ ವಿಚಾರಣೆಗೆ ಅಗತ್ಯವಾದ ಅಸಾಧಾರಣ ಮತ್ತು ವಿಶಿಷ್ಟ ಪ್ರಕರಣ. ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಿ'' ಎಂದು ಸಿಬಿಐ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಈ ಬೆನ್ನಲ್ಲೇ ಅನಿಲ್ ದೇಶ್ ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ದಿಲೀಪ್ ವಾಲ್ಸಾ ಪಾಟೀಲ್ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.