ಬೆಂಗಳೂರು, ಎ.06 (DaijiworldNews/MB) : 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರಿಗೆ ಎಸ್ಮಾ ಜಾರಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖಾಧಿಕಾರಿಗಳು ಹಾಗೂ ನಾಲ್ಕು ಸಾರಿಗೆ ನಿಗಮದ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದರು. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ''ಸಾರಿಗೆ ನೌಕರರು ಮುಷ್ಕರ ನಡೆಸಿದರೆ ವಿಪತ್ತು ನಿರ್ವಹಣಾ ಕಾಯ್ದೆ,ಎಸ್ಮಾ ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು'' ಎಂದು ಹೇಳಿದರು.
''ಹಾಗೆಯೇ ಸಾರಿಗೆ ನೌಕರರೊಂದಿಗೆ ಮತ್ತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಆರನೇ ವೇತನ ಆಯೋಗ ಜಾರಿಗೊಳಿಸಲು ಸಾಧ್ಯವೂ ಇಲ್ಲ. ಈಗಾಗಲೇ ಕೊರೊನಾ ಕಾರಣದಿಂದಾಗಿ ಮುಷ್ಕರ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಅಷ್ಟಕ್ಕೂ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಮಾಡಲಾಗುವುದು. ಹಾಗೆಯೇ ಸರ್ಕಾರ ಸಾರಿಗೆ ವ್ಯವಸ್ಥೆ ನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡಲು ಸಿದ್ದವಿದೆ'' ಎಂದರು.
''ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಎಲ್ಲಾವನ್ನೂ ಪರವಾನಗಿ ಕೇಳದೆ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ. ರೂಟ್, ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮತ್ತೆ ಸಂಧಾನ ಇಲ್ಲ'' ಎಂದು ಸ್ಪಷ್ಟಪಡಿಸಿದರು.
''6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸಾಧ್ಯವಿಲ್ಲವಾದರೂ ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಈಗ ಉಪಚುನಾವಣೆ ನಡೆಯುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. ನೌಕಕರ ಸಂಬಳ ಹೆಚ್ಚಳ ಘೋಷಣೆ ಮಾಡಲು ಈಗಾಗಲೇ ಚುನಾವಣಾ ಆಯೋಗದ ಅನುಮತಿಯೂ ಕೋರಲಾಗಿದೆ'' ಎಂದು ತಿಳಿಸಿದರು.
''ಇನ್ನು ಪ್ರತಿದಿನ ಸರಿಸುಮಾರು 4 ಕೋಟಿ ನಷ್ಟವಾಗುತ್ತಿದೆ. ಆದರೂ ನಾವು ನೌಕರರಿಗೆ ಸಂಬಳ ನೀಡಿದ್ದೇವೆ. ಶೇ.8 ರಷ್ಟು ಹೆಚ್ಚಳ ಮಾಡಲು ನಮಗೆ ಅವಕಾಶ ನೀಡಿ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ'' ಎಂದರು.