ಕೋಲ್ಕತ್ತಾ, ಏ 06(DaijiworldNews/MS): ಬಂಗಾಳದ ಮುಸ್ಲಿಂರು ತಮ್ಮ ಮತಗಳನ್ನು ವಿಭಜಿಸಬಾರದೆಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಮನವಿಯೂ , ಅವರು ಮುಸ್ಲಿಂ ರ ಬೆಂಬಲವನ್ನು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಬಂಗಾಳದ ಕೂಚ್ ಬೆಹಾರ್ ನಲ್ಲಿ ಮೂರನೇ ಹಂತದ ಚುನಾವಣೆಗಾಗಿ ನಡೆಸಿದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 'ಪ್ರಿಯ ದೀದಿ, ಇತ್ತೀಚೆಗೆ ನೀವು ಎಲ್ಲಾ ಮುಸ್ಲಿಮರು ಒಂದಾಗಬೇಕು, ಮತಗಳನ್ನು ವಿಭಜಿಸಲು ಅನುಮತಿಸಬಾರದು ಎಂದು ನೀವು ಹೇಳಿದ್ದೀರಿ. ನೀವು ಹೇಳುತ್ತಿರುವುದು ನೋಡಿದರೆ ಮುಸ್ಲಿಂ ಮತ ಬ್ಯಾಂಕ್ ಸಹ ನಿಮ್ಮ ಕೈಜಾರಿ ಹೋಗಿದೆ ಎಂದು ನಿಮಗೆ ಮನವರಿಕೆಯಾಗಿದೆ. ನಿಮ್ಮಿಂದ ಮುಸ್ಲಿಮರು ಸಹ ದೂರ ಸರಿದಿದ್ದಾರೆ. ನೀವು ಇದನ್ನು ಸಾರ್ವಜನಿಕವಾಗಿ ಹೇಳಿದ್ದೀರಿ ಎಂದರೆ ಚುನಾವಣೆಯಲ್ಲಿ ಸೋಲುವ ಭಯ ತೋರಿಸುತ್ತದೆ' ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
'ದೀದಿ, ನೀವು ಚುನಾವಣಾ ಆಯೋಗದ ಬಗ್ಗೆ ನಿಂದನೆ ಮಾಡುತ್ತಿದ್ದೀರಿ. ಆದರೆ ನಾವು ಹಿಂದೂಗಳನ್ನು ಒಗ್ಗೂಡಿಸಿ ಬಿಜೆಪಿಗೆ ಮತ ಚಲಾಯಿಸುವಂತೆ ಕೇಳಿದ್ದರೆ ನಮಗೆ ಚುನಾವಣಾ ಆಯೋಗದಿಂದ ಎಂಟು ಅಥವಾ ಹತ್ತು ನೋಟಿಸ್ ಬರುತ್ತಿತ್ತು, ಇಡೀ ದೇಶದಲ್ಲಿ ನಮ್ಮ ಬಗ್ಗೆ ಸಂಪಾದಕೀಯಗಳನ್ನು ಬರೆಯಬಹುದಿತ್ತು' ಎಂದರು.
ಇದೇ ವೇಳೆ ಬಂಗಾಳದಲ್ಲಿನ ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ಹಿಂದಿರುಗಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.