ಚೆನ್ನೈ, ಎ.06 (DaijiworldNews/MB) : ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ನಟ ವಿಜಯ್ ಅವರು ಸೈಕಲ್ನಲ್ಲಿ ಬಂದು ಮತದಾನ ಮಾಡಿದ್ದಾರೆ. ಮಾಸ್ಟರ್ ನಾಯಕ ವಿಜಯ್ ಅವರ ಈ ನಡೆ ಭಾರೀ ಕುತೂಹಲ ಕೆರಳಿಸಿದ್ದು ಪೆಟ್ರೋಲ್ ಬೆಲೆ ಏರಿಕೆ ವಿರುದ್ದವಾಗಿ ವಿಜಯ್ ಈ ರೀತಿ ಸೈಕಲ್ ಏರಿ ಬಂದಿದ್ದಾರೆ ಎಂದು ಹೇಳಲಾಗಿದೆ.
ಚೆನ್ನೈನ ನೀಲಾಂಕರೈನ ಮತಗಟ್ಟೆಗೆ ವಿಜಯ್ ಕಾರಿನಲ್ಲಿ ಬಾರದೆ ಸೈಕಲ್ನಲ್ಲಿ ಬಂದು ಮತಚಲಾಯಿಸಿದರು. ಚುನಾವಣೆ ದಿನವೇ ಈ ರೀತಿ ಸೈಕಲ್ನಲ್ಲಿ ಬಂದಿರುವುದು ಪೆಟ್ರೋಲ್ ಬೆಲೆ ಏರಿಕೆಯ ವಿರುದ್ದ ವಿಜಯ್ ಪ್ರತಿಭಟನೆ ಎನ್ನಲಾಗಿದೆ. ಈ ಹಿಂದೆ ವಿಜಯ್ ತಮ್ಮ ಸಿನಿಮಾದಲ್ಲೂ ಸರ್ಕಾರದ ನಿರ್ಣಯಗಳನ್ನು ವಿರೋಧಿಸಿದ್ದರು. ಈ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ವಿಜಯ್ ಅಭಿನಯದ 'ಮೆರ್ಸಲ್' ಚಿತ್ರದಲ್ಲಿ ವಿಜಯ್ ಜಿಎಸ್ಟಿ ವಿರುದ್ಧವಾಗಿ ಡೈಲಾಗ್ ಹೊಡೆಯುವ ಮೂಲಕ ಸುದ್ದಿಯಾಗಿದ್ದರು.
ವಿಜಯ್ ಅವರ ಈ ಡೈಲಾಗ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಈ ಸಿನಿಮಾದ ವಿರುದ್ದ ಪ್ರತಿಭಟಿಸಿದರೆ, ಕಾಂಗ್ರೆಸ್, ಎಡಪಕ್ಷಗಳು ಈ ಸಿನಿಮಾದಲ್ಲಿ ವಿಜಯ್ ಡೈಲಾಗ್ನ್ನು ಕೊಂಡಾಡಿದ್ದರು. ಈಗ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹಲವು ಸಂಘಟನೆಗಳು ಸೈಕಲ್ ಮೆರವಣಿಗೆಯಂತಹ ಪ್ರತಿಭಟನೆಗಳನ್ನು ನಡೆಸುತ್ತಿರುವ ನಡುವೆಯೇ ಚುನಾವಣೆಯ ದಿನ ಮತ ಚಲಾಯಿಸಲು ವಿಜಯ್ ಸೈಕಲ್ ಏರಿ ಬಂದಿರುವುದು ಪೆಟ್ರೋಲ್ ಬೆಲೆ ಏರಿಕೆ ವಿರುದ್ದದ ವಿಜಯ್ ಪ್ರತಿಭಟನೆ ಎಂದು ಹೇಳಲಾಗುತ್ತಿದೆ.
ಆದರೆ ವಕ್ತಾರರು ಮಾತ್ರ ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ಮತಗಟ್ಟೆ ಸಮೀಪದಲ್ಲೇ ಇದ್ದ ಕಾರಣ ಅವರು ಕಾರಿನ ಬದಲಾಗಿ ಸೈಕಲ್ನಲ್ಲಿ ಬಂದರು. ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಹೇಳಿದ್ದಾರೆ.