ನವದೆಹಲಿ, ಏ. 06 (DaijiworldNews/HR): ಬಿಜೆಪಿ ಪಕ್ಷ ಯಾವಾಗಲೂ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದು, ನಮ್ಮ ಪಕ್ಷಕ್ಕೆ ರಾಷ್ಟ್ರ ಮುಖ್ಯ, ವ್ಯಕ್ತಿಗಿಂತ ರಾಷ್ಟ್ರವೇ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಭಾರತೀಯ ಜನತಾ ಪಕ್ಷದ 41ನೇ ಸ್ಥಾಪನಾ ದಿವಸ್ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ಪಕ್ಷದ ಸಿದ್ಧಾಂತವನ್ನು ಹೊರತಾಗಿ ಎಂದಿಗೂ ಬಿಜೆಪಿ ಇರಲಿಲ್ಲ. ಬಿಜೆಪಿಗೆ ರಾಷ್ಟ್ರವೇ ಮುಖ್ಯವಾಗಿದ್ದು, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕಾಲದಿಂದ, ಇಂದಿನ ತನಕವೂ ಅದೇ ಮೂಲ ಧ್ಯೆಯದೊಂದಿಗೆ ಪಕ್ಷ ಕಾರ್ಯ ನಿರ್ವಹಿಸುತ್ತಿದೆ ಎಂದರು.
"ಕೇಂದ್ರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸಲು ಮತ್ತು ನಾಗರಿಕರನ್ನು ದಾರಿ ತಪ್ಪಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ" ಎಂದಿದ್ದಾರೆ.
ಇನ್ನು "ಸುಳ್ಳುಗಳನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಪ್ರತಿ ಪಕ್ಷಗಳು ಮಾಡುತ್ತಿದ್ದು, ಅದು ಕೃಷಿ ಕಾನೂನುಗಳು, ಸಿಎಎ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದರ ಮೂಲಕ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವ ಗುರಿಯನ್ನು ಪ್ರತಿಪಕ್ಷಗಳು ಹೊಂದಿವೆ" ಎಂದು ಹೇಳಿದ್ದಾರೆ.