ರಾಯಚೂರು, ಎ.06 (DaijiworldNews/MB) : ''ಮುಖ್ಯಮಂತ್ರಿ ಬದಲಾವಣೆಗೆ ಆರ್ಎಸ್ಎಸ್ ಬಯಸಿದೆ. ಬಿಎಸ್ವೈ ಬದಲಾವಣೆಗೆ ಬಸನಗೌಡ ಯತ್ನಾಳ ಹಾಗೂ ಈಶ್ವರಪ್ಪ ಅವರಿಗೆ ಆರ್ಎಸ್ಎಸ್ ಹಾಗೂ ಸಂತೋಷ್ ಬೆಂಬಲವಿದೆ'' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿರುವ ಅವರು ಮಂಗಳವಾರ ಪಗಡದಿನ್ನಿ ಕ್ಯಾಂಪ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ''ಮುಖ್ಯಮಂತ್ರಿ ಬದಲಾವಣೆಗೆ ಆರ್ಎಸ್ಎಸ್ ಬಯಸಿದೆ. ಅದಕ್ಕಾಗಿ ಈಶ್ವರಪ್ಪ, ಯತ್ನಾಳ್ಗೆ ಬೆಂಬಲಿಸಿದೆ. ಆದರೆ ಈ ಸರ್ಕಾರಕ್ಕೆ ಸಮಸ್ಯೆಯನ್ನು ನಿಭಾಯಿಸುವ ಶಕ್ತಿಯೇ ಇಲ್ಲ'' ಎಂದು ಟೀಕಿಸಿದರು.
''ಸಚಿವ ಈಶ್ವರಪ್ಪ ಅವರು ಪತ್ರ ಬರೆದದ್ದು ಗಂಭೀರವಾದ ವಿಚಾರ. ಸುಮಾರು ನಾಲ್ಕು ತಿಂಗಳಿನಿಂದ ಬಸನಗೌಡ ಯತ್ನಾಳ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರ ಯಾಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ'' ಎಂದು ಪ್ರಶ್ನಿಸಿದರು.
ಇನ್ನು, ''ವರುಣ ಕ್ಷೇತ್ರಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಯಾವ ಕೊಡುಗೆ ನೀಡಿದ್ದಾರೆ? ವಿಜಯೇಂದ್ರ ಚಾಣಕ್ಯನೇ ಆಗಿದ್ದರೆ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ ಅವನು ಎಲ್ಲಿಗೆ ಹೋಗಿದ್ದ'' ಎಂದು ಪ್ರಶ್ನಿಸಿದ ಅವರು, ''ವರುಣದಲ್ಲಿ ಯಾರೂ ಸ್ಪರ್ಧಿಸಿದರೂ ಸ್ವಾಗತಿಸುತ್ತೇನೆ'' ಎಂದು ಹೇಳಿದರು.
'ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಯಾಕೆ ಸೇರಿದ್ದಾರೆ' ಎಂಬ ಶಾಸಕ ರೇಣುಕಾಚಾರ್ಯರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ''ನಾನು ಜೆಡಿಎಸ್ ಬಿಟ್ಟು ಬಂದದಲ್ಲ. ಡಿಸಿಎಂ ಸ್ಥಾನದಿಂದ ಮಿಸ್ಟರ್ ದೇವೇಗೌಡ ತೆಗೆದರು. ಆಗ ಅಹಿಂದ ಕಟ್ಟಿದೆ. ಬಳಿಕ ಕಾಂಗ್ರೆಸ್ನವರು ಕರೆದಿದ್ದು ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿಯೇ ನಾನು ಕಾಂಗ್ರೆಸ್ಗೆ ಸೇರಿದೆ. ನಾನು ಪ್ರತಾಪಗೌಡ ತರಹ ದುಡ್ಡು ತಗೊಂಡು ಕಾಂಗ್ರೆಸ್ಗೆ ಬಂದವನಲ್ಲ'' ಎಂದು ಟಾಂಗ್ ನೀಡಿದರು.