ಬೆಂಗಳೂರು, ಎ.06 (DaijiworldNews/MB) : ''ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಹೀಗಿರುವಾಗ ವೇತನ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು. ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದು ಮುಷ್ಕರ ಕೈಬಿಡಿ'' ಎಂದು ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಸಾರಿಗೆ ನೌಕರರು ನೀಡಿದ್ದ ಗಡುನಿನಲ್ಲಿ ಬೇಡಿಕೆ ಈಡೇರಿಸಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಆರೋಪಿಸಿದ್ದು ಏ.7 ರಂದು ಸಾರಿಗೆ ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು, ''ಈಗಾಗಲೇ ನಾವು ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲು ಚುನಾವಣಾ ಆಯೋಗದ ಅನುಮತಿ ಕೋರಿದ್ದೇವೆ. ಈಗ ಉಪಚುನಾವಣೆ ನಡೆಯುತ್ತಿರುವ ಕಾರಣ ನಾವು ಈ ರೀತಿ ವೇತನ ಹೆಚ್ಚಳ ಘೋಷಣೆ ಮಾಡುವಂತಿಲ್ಲ. ಈಗ ನಾವು ಅನುಮತಿ ಕೋರಿದ್ದು ಆಯೋಗ ಅನುಮತಿ ನೀಡಿದರೆ ಕೂಡಲೇ ವೇತನ ಹೆಚ್ಚಳ ಮಾಡುತ್ತೇವೆ'' ಎಂದು ಹೇಳಿದ್ದಾರೆ.
ಹಾಗೆಯೇ, ''ಈಗ ನೌಕರರು ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿರುವ ಅವರು, ಈಗಾಗಲೇ ನೌಕರರ ನಾಲ್ಕು ದಿನಗಳ ಮುಷ್ಕರದಿಂದ ಸರ್ಕಾರಕ್ಕೆ ರೂ. 7 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದಾರೆ. ಸಾರಿಗೆ ನೌಕರರು ಮತ್ತೆ ಮುಷ್ಕರ ನಡೆಸಿದರೆ ಸಾರ್ವಜನಿಕರಿಗೆ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಭಾರೀ ತೊಂದರೆ ಉಂಟಾಗುತ್ತದೆ. ಸರ್ಕಾರಕ್ಕೆ ಮತ್ತೆ ರೂ.2 ಕೋಟಿ ನಷ್ಟವಾಗುತ್ತದೆ. ನೌಕರರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು'' ಎಂದು ವಿನಂತಿಸಿದ್ದಾರೆ.
''ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳ ಮಾಡಿದರೆ ರೂ.3,800 ಕೋಟಿ ಹೊರೆಯಾಗಲಿದೆ. ಇದಕ್ಕೆ ಹಣ ಎಲ್ಲಿಂದ ಪಡೆಯುವುದು ಎಂದು ಚರ್ಚಿಸಲು ಸಮಯ ಬೇಕಲ್ಲವೇ'' ಎಂದು ಪ್ರಶ್ನಿಸಿದ ಅವರು ''ಈಗಾಗಲೇ ಆದಾಯ ಅತ್ಯಂತ ಕಡಿಮೆ ಇದೆ ಎಂದು ಯಾವುದೇ ವರ್ಷದಲ್ಲೂ ಮಾಡದ ಸಾಲವನ್ನು ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.