ನವದೆಹಲಿ, ಎ.06 (DaijiworldNews/MB) : ಇಂದು ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದನೇ ಹಂತದ ಮತದಾನ ನಡೆಯುತ್ತಿದ್ದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಮತದಾನ ನಡೆಯುತ್ತಿದೆ. ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಲಿದ್ದು ಅಸ್ಸಾಂನಲ್ಲಿಯೂ ಇಂದು ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ. ಪಶ್ಚಿಮ ಬಂಗಾಳ ಮಾತ್ರ ಇನ್ನೂ ಐದು ಹಂತಗಳ ಮತದಾನ ಪ್ರಕ್ರಿಯೆ ಬಾಕಿಯಿದೆ.
ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳ ಮತದಾನಕ್ಕಾಗಿ ಒಟ್ಟು 40,771 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೇರಳದಲ್ಲಿ ಒಟ್ಟು ಮತದಾರರ ಸಂಖ್ಯೆ 2,74,46,039 ಆಗಿದ್ದು ಈ ಪೈಕಿ 1,32,83,724 ಪುರುಷರು, 1,41,62,025 ಮಹಿಳೆಯರು ಮತ್ತು 290 ತೃತೀಯ ಲಿಂಗದವರು ಆಗಿದ್ದಾರೆ. ಈ ಬಾರಿ ಒಟ್ಟು 957 ಅಭ್ಯರ್ಥಿಗಳು ಚುನಾವಣೆ ಕಣಕ್ಕಿಳಿದಿದ್ದು ಈ ಬಾರಿ ಕೆಲವೆಡೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಮೆಟ್ರೊಮ್ಯಾನ್ ಇ.ಶ್ರೀಧರನ್ ಅವರ ನೇತೃತ್ವದಲ್ಲಿ ಬಿಜೆಪಿ ಈ ಬಾರಿ ಚುನಾವಣೆ ಎದುರಿಸುತ್ತಿದೆ. ಸತತ ಪ್ರವಾಹಗಳ ನಿರ್ವಹಣೆ, ಕೊರೊನಾ ಲಾಕ್ಡೌನ್ ಸಂದರ್ಭ ಕೈಗೊಂಡ ಸಾಮಾಜಿಕ ಭದ್ರತಾ ಯೋಜನೆಗಳು ಎಲ್ಡಿಎಫ್ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುವುದನ್ನು ತಡೆದಿದ್ದು ಇದನ್ನೇ ಮುಂದಿಟ್ಟು ಎಲ್ಡಿಎಫ್ ಚುನಾವಣೆ ಎದುರಿಸುತ್ತಿದೆ. ಇತ್ತ ಕಾಂಗ್ರೆಸ್ ಎಲ್ಡಿಎಫ್ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಚುನಾವಣೆ ಪ್ರಚಾರ ನಡೆಸಿದೆ.
ಅಸ್ಸಾಂನಲ್ಲಿ ಒಟ್ಟು ಮೂರು ಹಂತದಲ್ಲಿ ಮತದಾನ ನಡೆದಿದ್ದು ಇಂದು ಕೊನೆಯ ಹಂತದ ಮತದಾನ ನಡೆಯಲಿದ್ದು 40 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಮಿತ್ರಪಕ್ಷ ಯುಪಿಪಿಎಲ್ ಮತ್ತು ಕಾಂಗ್ರೆಸ್ನ ಮಿತ್ರಪಕ್ಷ ಬಿಪಿಎಫ್ ಮಧ್ಯೆ ಇಲ್ಲಿ ನೇರ ಹಣಾಹಣಿ ಇದೆ. ತಮಿಳುನಾಡಿನಲ್ಲಿ 2021ರ ವಿಧಾನಸಭಾ ಚುನಾವಣೆಯು ತಮಿಳುನಾಡಿನ ಬಲಿಷ್ಠ ರಾಜಕೀಯ ನಾಯಕರಾದ ಡಿಎಂಕೆ ನಾಯಕ ಎಂ ಕರುಣಾನಿಧಿ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು ಇತಿಹಾಸದಲ್ಲೇ ಬಹಳ ಮಹತ್ವದ ಚುನಾವಣೆ ಎಂದು ಹೇಳಲಾಗುತ್ತಿದೆ. ಇಲ್ಲಿ ಒಂದೇ ಹಂತದಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೂಡ ಇಂದು ಮತದಾನ ನಡೆಯಲಿದ್ದು 30 ಕ್ಷೇತ್ರಗಳಲ್ಲಿ 324 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು10,04,507 ಮತದಾರರು ಸಿದ್ದರಾಗಿದ್ದಾರೆ.
ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಮೇ.2 ರಂದು ಫಲಿತಾಂಶ ಪ್ರಕಟವಾಗಲಿದೆ.