ಕೋಲ್ಕತ್ತಾ, ಏ. 06 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಸೋಮವಾರ ರಾತ್ರಿ ಉಲುಬೆರಿಯಾ ಉತ್ತರ ಕ್ಷೇತ್ರದಲ್ಲಿನ ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ನಾಲ್ಕು ಇವಿಎಂ ಮತಯಂತ್ರಗಳು ಹಾಗೂ ನಾಲ್ಕು ವಿವಿಪ್ಯಾಟ್ ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಟಿಎಂಸಿ ಮುಖಂಡ ಗೌತಮ್ ಘೋಷ್ ಅವರ ಮನೆಯಿಂದ ಈ ಇವಿಎಂ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯ ಚಿರಾನ್ ಬೇರಾ ಆರೋಪಿಸಿದ್ದಾರೆ.
ಇನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರಿನಲ್ಲೇ ಈ ಯಂತ್ರಗಳನ್ನು ತರಲಾಗಿದ್ದು, "ಸೆಕ್ಟರ್ 17"ರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರು ಟಿಎಂಸಿ ಮುಖಂಡನ ಮನೆ ಮುಂದೆ ರಾತ್ರಿ ನಿಂತಿತ್ತು ಎಂದು ಆರೋಪಿಸಿದ್ದಾರೆ.
ತಡರಾತ್ರಿಯಾದ್ದರಿಂದ ಚುನಾವಣಾ ಸಿಬ್ಬಂದಿ ಮಲಗಿದ್ದು, ಮತಗಟ್ಟೆಗಳನ್ನು ತೆರೆಯಲಿಲ್ಲ. ಹಾಗಾಗಿ ಸಂಬಂಧಿ ಮನೆಗೆ ಮಲಗಲು ಬಂದಿದ್ದೆ ಎಂದು ವಲಯಾಧಿಕಾರಿ ಉತ್ತರಿಸಿದ್ದು, ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾತ್ರೋರಾತ್ರಿ ಜನರು ಜಮಾಯಿಸಿದ್ದಾರೆ. ಜನರನ್ನು ಚದುರಿಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಟಿಎಂಸಿ ಮುಖಂಡನ ಮನೆಯಲ್ಲಿರಿಸಲಾಗಿದ್ದ ಇವಿಎಂ ಹಾಗೂ ವಿವಿಪ್ಯಾಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದು 31 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.