ನವದೆಹಲಿ, ಎ.05 (DaijiworldNews/MB) : ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಕಳುಹಿಸುತ್ತಿರುವ ಫ್ರಾನ್ಸ್ನ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್, ಈ ಒಪ್ಪಂದದ ಬಳಿಕ ಭಾರತದಲ್ಲಿನ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ (ರೂ 8.62 ಕೋಟಿ) ಹಣ ನೀಡಿತ್ತು ಎಂದು ಫ್ರಾನ್ಸ್ನ 'ಮೀಡಿಯಾಪಾರ್ಟ್' ಆನ್ಲೈನ್ ಪತ್ರಿಕೆ ವರದಿ ಮಾಡಿದೆ.
ಕಂಪನಿಯು ರಫೇಲ್ ಜೆಟ್ಗಳ 50 ಬೃಹತ್ ಪಡಿಯಚ್ಚುಗಳನ್ನು ತಯಾರಿಸಲು ಈ ಹಣವನ್ನು ಪಾವತಿ ಮಾಡಿದೆ ಎಂದು ಕಂಪೆನಿ ತಿಳಿಸಿದೆ. ಆದರೆ ಮಾದರಿ ನಿರ್ಮಾಣವಾಗಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಈ ಹಣ ಪಡೆದ ಮಧ್ಯವರ್ತಿಯು ಮತ್ತೊಂದು ರಕ್ಷಣಾ ಒಪ್ಪಂದದಲ್ಲಿ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ವರದಿ ಮಾಡಿದೆ.
ಹೆಲಿಕಾಪ್ಟರ್ ಹಗರಣದಲ್ಲಿ ಸುಶೇನ್ ಗುಪ್ತಾ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2017ರ ಮಾರ್ಚ್ 30ರಂದು ಡೆಫ್ಸಿಸ್ ಸಲ್ಯೂಷನ್ಸ್ ನೀಡಿದ ಇನ್ವಾಯ್ಸ್ ಅನ್ನು ಮುಂದಿಟ್ಟುಕೊಂಡು ಅವರು ಭಾರೀ ಮೊತ್ತ ಪಡೆಯಲು ಯತ್ನಿಸಿದ್ದರು. ಸುಶೇನ್ ಗುಪ್ತಾ ಮಾಲೀಕತ್ವದ ಭಾರತದ ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಕಂಪೆನಿಯಿಂದ ಪಡೆದ ಇನ್ವಾಯ್ಸ್ ಅನ್ನು ಫ್ರಾನ್ಸ್ನ ತನಿಖಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ವರದಿಯಾಗಿದೆ. ಯುಪಿಎ ಅವಧಿಯಲ್ಲಿ ನಡೆದ ವಿವಿಐಪಿ ಹೆಲಿಕಾಪ್ಟರ್ ಖರೀದಿಯ ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಗುಪ್ತಾ ಅವರ ವಿರುದ್ದ ಸಿಬಿಐ ಮತ್ತು ಇ.ಡಿ ವಿಚಾರಣೆ ನಡೆಸುತ್ತಿವೆ.
ಇನ್ನು ಡಸಾಲ್ಟ್ ಸಂಸ್ಥೆಯು ಮಧ್ಯವರ್ತಿಗೆ ನೀಡಿದ ಹಣವನ್ನು ತಮ್ಮ ಖಾತೆಯಲ್ಲಿ 'ಗ್ರಾಹಕರಿಗೆ ಉಡುಗೊರೆ' ಎಂದು ಉಲ್ಲೇಖಿಸಿರುವುದು ಏಕೆ ಹಾಗೂ ರಫೇಲ್ನ ಪಡಿಯಚ್ಚು ಮಾದರಿಗಳನ್ನು ತಯಾರಿಸಲಾಗಿದೆಯೇ ಎಂಬ ಪ್ರಶ್ನಗೆ ಉತ್ತರ ನೀಡಲು ಡಸಾಲ್ಟ್ಗೆ ಸಾಧ್ಯವಾಗಿಲ್ಲ ಎಂದು ಕೂಡಾ ಹೇಳಲಾಗಿದೆ.
ಈ ಹಿಂದೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮಂದಿ ಆರೋಪ ಮಾಡಿದ್ದರು. ಆದರೆ ಈ ಬಗ್ಗೆ ಮೊದಲ ಬಾರಿಗೆ ಪ್ರಾನ್ಸ್ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.