ಬೆಂಗಳೂರು, ಎ.05 (DaijiworldNews/PY): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದದ ತೆರಿಗೆ ವಂಚನೆ ಹಾಗೂ ಸಾಕ್ಷ್ಯ ಪ್ರಕರಣವನ್ನು ವಜಾಗೊಳಿಸಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಈ ಮುಖೇನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ವಿಶೇಷ ನ್ಯಾಯಾಲಯವು, ಡಿಕೆಶಿ ಅವರ ವಿರುದ್ದ ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ವಜಾ ಮಾಡಿತ್ತು. ಆದಾಯ ತೆರಿಗೆ ಇಲಾಖೆಯು ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದು, ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾ ಮಾಡಿ, ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಐಟಿ ಇಲಾಖೆಯ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರಿಂದ ತೆರಿಗೆ ವಂಚನೆ ನಡೆಸಿದೆ ಎಂದು ಆರೋಪಿಸಿದ್ದು, "ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭ ಮಾಜಿ ಸಚಿವರು ದಾಖಲೆ ಪತ್ರಗಳನ್ನು ಹರಿದು ದಾಖಲೆಗಳನ್ನು ನಾಶ ಮಾಡಿದ್ದಾರೆ" ಎಂದು ಆರೋಪಿಸಿತ್ತು.
2015-16ರ ಅವಧಿಗೆ 3.14 ಕೋಟಿ ರೂ ತೆರಿಗೆ ವಂಚಿಸಲಾಗಿದೆ. 2016-17ರಲ್ಲಿ ಅಂದಾಜು 2.56 ಕೋಟಿ ರೂ. ಹಾಗೂ 2017-18ರಲ್ಲಿ 7.08 ಕೋಟಿ ರೂ. ತೆರಿಗೆ ವಂಚಿಸಲಾಗಿದೆ ಎಂದು ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.