ಬೆಂಗಳೂರು, ಏ.05 (DaijiworldNews/HR): 2008ರ ಬೆಂಗಳೂರು ಸ್ಫೋಟ ಪ್ರಕರಣ ಆರೋಪಿ ಅಬ್ದುಲ್ ನಜೀರ್ ಮದನಿಗೆ 'ನೀವು ಅಪಾಯಕಾರಿ ವ್ಯಕ್ತಿ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ ಆರು ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಜೀರ್ ಮದನಿ ವಿಚಾರಣೆ ಮುಗಿಯುವವರೆಗೆ ಕೇರಳದ ಸ್ವಂತ ಊರಿಗೆ ತೆರಳಿ ಅಲ್ಲಿ ಉಳಿಯಲು ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಮದನಿ ಮನವಿ ಸಲ್ಲಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ನೀವು ಅಪಾಯಕಾರಿ ವ್ಯಕ್ತಿ ಎಂದು ಹೇಳಿದೆ.
ಇನ್ನು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿಚಾರಣೆ ವಿಳಂಬವಾಗಿದ್ದು, ವಿಚಾರಣೆ 'ಬಸವನ ಹುಳುವಿನ ವೇಗ'ದಲ್ಲಿ ಸಾಗುತ್ತಿದೆ. ಸಾಕ್ಷಿಗಳ ಮರುವಿಚಾರಣೆ, ಮೂರು ಬಾರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವರ್ಗಾವಣೆ ಹಾಗೂ ಕೊರೊನಾ ಸಾಂಕ್ರಾಮಿಕದಿಂದಾಗಿ ವಿಳಂಬ ಉಂಟಾಗಿದೆ. ವಿಚಾರಣೆ ನಡೆಸಬೇಕಿರುವ ಮುಖ್ಯ ಅಧಿಕಾರಿ ಕೂಡ ವರ್ಗಾವಣೆಯಾಗಿದ್ದು ವಿಚಾರಣೆ ನಡೆಸಲು ಈಗ ಯಾವ ಅಧಿಕಾರಿಯೂ ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಎರ್ನಾಕುಲಂನಲ್ಲಿ ಕಣ್ಣಿಗೆ ಆಯುರ್ವೇದ ಚಿಕಿತ್ಸೆ ಪಡೆಯುವಂತೆ ಬೆಂಗಳೂರಿನ ವೈದ್ಯರು ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಮದನಿ ತಿಳಿಸಿದ್ದಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲ ಎನ್ನಲಾಗಿದೆ.