ಬೆಂಗಳೂರು, ಎ.05 (DaijiworldNews/PY): ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಗೆ ಕರೋನಾ ಪಾಸಿಟಿವ್ ನಿಜವೇ ಆಗಿದ್ದರೆ ಅವರ ಸಂಪರ್ಕಕ್ಕೆ ಬಂದಿದ್ದ ಎಸ್ಐಟಿ ಅಧಿಕಾರಿಗಳು ಕೋವಿಡ್ ಪರೀಕ್ಷೆಗೆ ಒಳಪಡದೆ, ಕ್ವಾರಂಟೈನ್ ಆಗದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ತಪ್ಪಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಗೆ ಕರೋನಾ ಪಾಸಿಟಿವ್ ಎನ್ನುವ ವರದಿಯಾಗಿದೆ. ಅದು ನಿಜವೇ ಆಗಿದ್ದರೆ ಅವರ ಸಂಪರ್ಕಕ್ಕೆ ಬಂದಿದ್ದ ಎಸ್ಐಟಿ ಅಧಿಕಾರಿಗಳು ಕೋವಿಡ್ ಪರೀಕ್ಷೆಗೆ ಒಳಪಡದೆ, ಕ್ವಾರಂಟೈನ್ ಆಗದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ತಪ್ಪಲ್ಲವೇ?" ಎಂದು ಕೇಳಿದೆ.
ಮತ್ತೊಂದು ಟ್ವೀಟ್ನಲ್ಲಿ, "ರಮೇಶ್ ಜಾರಕಿಹೊಳಿ "ಜಾರಿಕೊಳ್ಳಲು" ಕರೋನಾ ಹೆಸರಿನ ನೆಪವೇ?. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ದಲಿತಪರ ಧ್ವನಿಗಳಾಗಿದ್ದ ಚಿಂತಕರ ವೃದ್ಧಾಪ್ಯವನ್ನು ಲೆಕ್ಕಿಸದೆ, ಅನಾರೋಗ್ಯವನ್ನೂ ಪರಿಗಣಿಸದೆ ಕ್ರೂರವಾಗಿ ನಡೆಸಿಕೊಂಡ ಬಿಜೆಪಿ ಈಗ ಅತ್ಯಾಚಾರ ಆರೋಪಿಗೆ ಅನಾರೋಗ್ಯದ ನೆಪ ಹೇಳುವುದು ಹಾಸ್ಯಾಸ್ಪದ. "ಕಳ್ಳನಿಗೊಂದು ಪಿಳ್ಳೆ ನೆಪ"!!" ಎಂದು ವ್ಯಂಗ್ಯ ಮಾಡಿದೆ.
"ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ನಲ್ಲಿದ್ದ ಅವರಿಗೆ ರವಿವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಹಾಗೂ ಬಿಪಿ, ಶುಗರ್ನಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಗೋಕಾಕ್ ಆಸ್ಪತ್ರೆಯ ಟಿಹೆಚ್ ಒ ಡಾ. ಮುತ್ತಣ್ಣ ಕೋಪದ್ ಹೇಳಿದ್ದಾರೆ.