ನವದೆಹಲಿ, ಎ.05 (DaijiworldNews/MB) : ಛತ್ತೀಸ್ ಗಢದ ಬಿಜಾಪುರ್ ಎಂಬಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ 20ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದು ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸಿಆರ್ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಸ್ ಎಂಬವರು ಮಾವೋವಾದಿಗಳ ವಶದಲ್ಲಿದ್ದಾರೆ ಎಂದು ವರದಿಯಾಗಿದೆ.
ಈ ಕಾರ್ಯಚರಣೆ ಸಂದರ್ಭ ನಾಪತ್ತೆಯಾಗಿದ್ದ ''ಸಿಆರ್ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಸ್ ನಮ್ಮ ವಶದಲ್ಲಿದ್ದಾನೆ. ಮನ್ಹಸ್ ಜೀವಂತವಾಗಿದ್ದಾನೆ, ಆತನಿಗೆ ಯಾವುದೇ ತೊಂದರೆ ಮಾಡಲ್ಲ. ಆತನ ಬಿಡುಗಡೆ ಮಾಡಲಾಗುವುದು'' ಎಂದು ಮಾವೋವಾದಿ ನಾಯಕತ್ವ ಸಿಆರ್ಪಿಎಫ್ಗೆ ಸಂದೇಶ ಕಳುಹಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಇನ್ನು ಮಾವೋವಾದಿಗಳು ಮನ್ಹಸ್ ಬಿಡುಗಡೆಗಾಗಿ ಬೇರಾವುದಾದರೂ ಬೇಡಿಕೆ ಇಟ್ಟಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಕೂಡಾ ವರದಿಯಾಗಿದೆ.
ಛತ್ತೀಸ್ಘಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ.