ಕೊಪ್ಪಳ, ಎ.05 (DaijiworldNews/MB) : ''ಯಡಿಯೂರಪ್ಪ ಚೆಕ್ ಮೂಲಕ ಲಂಚ ತಕ್ಕೊಂಡ್ರೆ, ವಿಜಯೇಂದ್ರ ಆರ್ಟಿಜಿಎಸ್ ಮೂಲಕವೇ ಪಡಿತಾರೆ. ವಿಜಯೇಂದ್ರ ಲೂಟಿ ಹೊಡೆದ ಹಣವಿಟ್ಟುಕೊಂಡು ಕೂತಿದ್ದಾನೆ. ಅದು ಯಡಿಯೂರಪ್ಪನವರದ್ದಲ್ಲ, ಆತ ಲೂಟಿ ಹೊಡೆದ ಹಣ'' ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಮಸ್ಕಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜಿಲ್ಲೆಯ ತುರ್ವಿಹಾಳ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ''ಎರಡು ವರ್ಷದಿಂದ ಯಡಿಯೂರಪ್ಪ ಸರ್ಕಾರ ಏನು ಮಾಡಿಲ್ಲ. ಅಷ್ಟಕ್ಕೂ ಏನಾದರೂ ಮಾಡಿರುವುದು ನೀವು ನೋಡಿದ್ದೀರಾ'' ಎಂದು ಪ್ರಶ್ನಿಸಿದರು.
''ಮೋದಿ ಓರ್ವ ಮಹಾಸುಳ್ಳುಗಾರ, ಅವರಂತೆ ಸುಳ್ಳು ಹೇಳುವವರನ್ನು ನಾನು ಈವರೆಗೂ ನೋಡಿಲ್ಲ'' ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದರು.
''ಈ ಉಪಚುನಾವಣೆಗೆ ಅಗತ್ಯವೇನು ಇರಲಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಶಾಸಕರಾಗಿರೋದು ಬಿಟ್ಟು ಪ್ರತಾಪಗೌಡರು ತಮ್ಮನ್ನೇ ತಾವು ಮಾರಾಟ ಮಾಡಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಇದು ನೀವೆಲ್ಲಾ ಒಪ್ಪುತ್ತೀರಾ'' ಎಂದು ಪ್ರಶ್ನಿಸಿದರು.
''ಪ್ರತಾಪಗೌಡ 30 ಕೋಟಿ ರೂ.ಗಾಗಿ ತಮ್ಮನ್ನೇ ತಾವು ಮಾರಾಟ ಮಾಡಿಕೊಂಡಿದ್ದು ಅವರಿಗೆ ಮಾನ ಮರ್ಯಾದೆ ಏನಾದರೂ ಇದೆಯಾ?. ಸಂತೆಯಲ್ಲಿ ಪ್ರಾಣಿಗಳನ್ನು ಮಾರಾಟವಾಗುತ್ತದೆ ಆದರೆ ಇಲ್ಲಿ ಮನುಷ್ಯರೇ ತಮ್ಮನ್ನು ತಾವು ಮಾರಿಕೊಳ್ಳುತ್ತಾರೆ'' ಎಂದು ಕಿಡಿಕಾರಿದರು.
''ಪ್ರತಾಪಗೌಡನನ್ನು 2018ರಲ್ಲಿ ಕಾಂಗ್ರೆಸ್ಗೆ ಸೇರಿಸುವುದು ಬೇಡ ಎಂದು ನಾನು ಹೇಳಿದ್ದೆ. ಆತನನ್ನು ನೋಡುವಾಗ ನನಗೆ ಕಳ್ಳನಂತೆ ಕಂಡಿತ್ತು'' ಎಂದು ಹೇಳಿದ ಸಿದ್ದರಾಮಯ್ಯನವರು, ''ಆ ಪ್ರತಾಪ್ಗೌಡನನ್ನು ಯಾರಲ್ಲೂ ಹೇಳದೆ ಕೇಳದ ಬಿಜೆಪಿಗೆ ಹೋಗಿದ್ದಾರೆ. ನಿಮ್ಮೆಲ್ಲರನ್ನೂ ಮಾರಾಟ ಮಾಡಿದ್ದಾನೆ'' ಎಂದು ವಾಗ್ದಾಳಿ ನಡೆಸಿದರು.