ಗ್ವಾಲಿಯರ್, ಎ.05 (DaijiworldNews/MB) : ಬ್ಯಾಟ್ಸ್ಮನ್ ಓರ್ವ 49ರನ್ ಗಳಿಸಿ ಅರ್ಧಶತಕ ಪೂರೈಸಲಿದ್ದ ಸಂದರ್ಭ ಬಾಲ್ ಕ್ಯಾಚ್ ಹಿಡಿದು ಫೀಲ್ಡರ್ ಔಟ್ ಮಾಡಿದನೆಂದು ಕೋಪಗೊಂಡು ಫೀಲ್ಡರ್ ಮೇಲೆ ಗಂಭೀರವಾಗಿ ಬ್ಯಾಟ್ನಿಂದ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನ ಗೋಲಾ ಕಾ ಮಂದಿರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಾಯಗೊಂಡ ಆಟಗಾರನನ್ನು 23 ವರ್ಷದ ಸಚಿನ್ ಪರಶಾರ್ ಹಾಗೂ ಹಲ್ಲೆ ಮಾಡಿದ ಬ್ಯಾಟ್ಸ್ಮನ್ ಸಂಜಯ್ ಪಾಳಿಯಾ ಎಂದು ಗುರುತಿಸಲಾಗಿದೆ.
ಗಾಯಗೊಂಡ ಆಟಗಾರ ಸಚಿನ್ ಪರಶಾರ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಬ್ಯಾಟ್ಸ್ಮನ್ ಸಂಜಯ್ ಪಾಳಿಯಾ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆದರೆ ಆತ ಪರಾರಿಯಾಗಿದ್ದು ಆತನ ಶೋಧ ಕಾರ್ಯಾಚರಣೆ ಪೊಲೀಸರು ಆರಂಭಿಸಿದ್ದಾರೆ.
ಶನಿವಾರ ಇಲ್ಲಿನ ಮೇಲಾ ಗ್ರೌಂಡ್ನಲ್ಲಿ ಪಂದ್ಯ ನಡೆದಿದ್ದು, ಸಂಜಯ್ ಪಾಳಿಯಾ 49 ರನ್ ಗಳಿಸಿ ಅರ್ಧಶತಕ ಪೂರೈಸುವ ಭರವಸೆಯಲ್ಲಿದ್ದರು. ಬೌಲರ್ ಎಸೆದ ಚೆಂಡನ್ನು ಸಿಕ್ಸರ್ ಭಾರಿಸುವ ಉದ್ದೇಶದಿಂದ ಅವರು ಭಾರಿಸಿದ್ದು ಅದನ್ನು ಫಿಲ್ಡರ್ ಆಗಿದ್ದ ಸಚಿನ್ ಪರಶಾರ್ ಕ್ಯಾಚ್ ಹಿಡಿದಿದ್ದಾರೆ. ನನ್ನ ಅರ್ಧಶತಕ ಪೂರೈಸಲು ಆತ ಬಿಡಲಿಲ್ಲ ಎಂದು ಆಕ್ರೋಶಗೊಂಡು ಸಂಜಯ್, ಸಚಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಹ ಆಟಗಾರರು ಆತನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಗ್ವಾಲಿಯರ್ ಎಸ್ಪಿ ರಾಮ್ ನರೇಶ್ ಪಚೌರಿ ತಿಳಿಸಿದ್ದಾರೆ.