ಬೆಂಗಳೂರು, ಎ.05 (DaijiworldNews/PY): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರೆದಿದ್ದು, "ಸಿ.ಡಿ.ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಧ್ವನಿ ಎತ್ತುತ್ತಿರುವುದು ಸಂತ್ರಸ್ತೆಗಾಗಿ ಅಲ್ಲ, ಬದಲಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ" ಎಂದು ಕಾಂಗ್ರೆಸ್ಗೆ ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಮೇಟಿ ಪ್ರಕರಣದಲ್ಲಿ ಸಂತ್ರಸ್ಥೆ ಪ್ರಕರಣ ದಾಖಲಿಸಿದರೂ ಎಫ್ಐಆರ್ ಕೂಡಾ ಮಾಡಿರಲಿಲ್ಲ, ವಿಚಾರಣೆ ಕೂಡಾ ನಡೆಸಿರಲಿಲ್ಲ. ಈಗ ಕಾಂಗ್ರೆಸ್ ಧ್ವನಿ ಎತ್ತುತ್ತಿರುವುದು ಸಂತ್ರಸ್ಥೆಗಾಗಿ ಅಲ್ಲ, ಸಿದ್ದರಾಮಯ್ಯಗಾಗಿ. ಡಿ.ಕೆ.ಶಿವಕುಮಾರ್ ಸಿಕ್ಕಿಸಿ ಹಾಕಲು ಸಿದ್ದರಾಮಯ್ಯ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಬಳಸಿಕೊಳ್ಳುತ್ತಿದ್ದಾರೆ" ಎಂದಿದೆ.
ಮತ್ತೊಂದು ಟ್ವೀಟ್ನಲ್ಲಿ, "ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸುವಾಗ ಡಿ.ಕೆ.ಶಿವಕುಮಾರ್ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಸದನದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ರೋಷಾವೇಶ ಪ್ರದರ್ಶಿಸಿದರು. ಈಗ ಷಡ್ಯಂತ್ರದಲ್ಲಿ ಡಿಕೆಶಿ ಹೆಸರು ಕೇಳಿ ಬರುತ್ತಿದೆ. ಡಿಕೆಶಿ ಮೌನವಾಗಿದ್ದಾರೆ. ಸಿದ್ದರಾಮಯ್ಯ ಮತ್ತೆ ಮತ್ತೆ ಕೆದಕುತ್ತಿದ್ದಾರೆ" ಎಂದು ಹೇಳಿದೆ.
"ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದೆ. ಸಿಎಂ ಆಗುವ ಕನಸಿಗೆ ತೊಡಕಾಗಿರುವ ಡಿಕೆಶಿ ಅವರನ್ನು ಮಣಿಸಲು ಸಿದ್ದರಾಮಯ್ಯ ಅವರಿಗೆ ಇದೊಂದು ಸದಾವಕಾಶ. ಈ ಪ್ರಕರಣದಲ್ಲಿ ಡಿಕೆಶಿ ಅವರನ್ನು ಸಿಲುಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯಗೆ ಶುಭವಾಗಲಿ" ಎಂದಿದೆ.